*ಬೆಳಗಾವಿಯಲ್ಲಿ ಗುರುದೇವ ಡಾ. ಆರ್.ಡಿ. ರಾನಡೆ ಶತಮಾನೋತ್ಸವ ಸಮಾರೋಪ ಸಮಾರಂಭ; 28 ಸಂಪುಟಗಳ ಕೃತಿಗಳ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಅಕಾಡೆಮಿ ಆಫ್ ಕಂಪ್ಯಾರೇಟಿವ್ ಫಿಲಾಸಫಿ ಅಂಡ್ ರಿಲಿಜಿಯನ್, ಗುರುದೇವ ರಾನಡೆ ಮಂದಿರ, ಹಿಂದವಾಡಿ, ಬೆಳಗಾವಿ ವತಿಯಿಂದ ಆಯೋಜಿಸಿರುವ ಗುರುದೇವ ಡಾ. ಆರ್.ಡಿ. ರಾನಡೆ ಅವರ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಮತ್ತು “ಗುರುದೇವ ಡಾ. ಆರ್.ಡಿ. ರಾನಡೆ ಅವರ ಸಂಪೂರ್ಣ ಕೃತಿಗಳು” (28 ಸಂಪುಟಗಳು) ಬಿಡುಗಡೆ ಕಾರ್ಯಕ್ರಮ ಜೂನ್ 29, 2026 ಸೋಮವಾರ ನಡೆಯಲಿದೆ.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಹಸ್ತದಿಂದ ಕಾರ್ಯಕ್ರಮದ ಉದ್ಘಾಟನೆ ಮತ್ತು ಗ್ರಂಥ ಬಿಡುಗಡೆ ನಡೆಯಲಿದೆ. ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ವಿವರ:
– ಬೆಳಿಗ್ಗೆ 8:30: ಹಿಂದವಾಡಿಯ ಮಾರುತಿ ಮಂದಿರದಿಂದ ಎಸಿಪಿಆರ್, ಗುರುದೇವ ರಾನಡೆ ಮಂದಿರದವರೆಗೆ ಮೆರವಣಿಗೆ.
– ಬೆಳಿಗ್ಗೆ 10:00: ಎಸಿಪಿಆರ್, ಗುರುದೇವ ರಾನಡೆ ಮಂದಿರದಲ್ಲಿ ಕೇಂದ್ರ ಸಚಿವರಿಗೆ ಸ್ವಾಗತ, ಆರತಿ, ಗುರುದೇವ ಮತ್ತು ಗ್ರಂಥಗಳಿಗೆ ಪುಷ್ಪ ನಮನ. ಧ್ಯಾನೇಶ್ವರಿ ಭಜನ ಮಂಡಲ, ವಡಗಾಂವ್ ಅವರಿಂದ ಭಜನಾ ಕಾರ್ಯಕ್ರಮ. ಕೇಂದ್ರ ಸಚಿವರ ಹಸ್ತದಿಂದ “ಶತಮಾನೋತ್ಸವ ಆಡಿಟೋರಿಯಂ”ಗೆ ಶಂಕುಸ್ಥಾಪನೆ ಮತ್ತು ವೃಕ್ಷಾರೋಪಣ. ಗುರುದೇವ ಅವರ ಸಂಪೂರ್ಣ ಕೃತಿಗಳ ಪ್ರೂಫ್ ರೀಡಿಂಗ್‌ಗೆ ಸಹಕರಿಸಿದವರಿಗೆ ಸನ್ಮಾನ.
- ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:30: ತಿಲಕವಾಡಿಯ ಗೋಗಟೆ ಕಾಲೇಜು ಆವರಣದ ಕೆ.ಕೆ. ವೇಣುಗೋಪಾಲ್ ಆಡಿಟೋರಿಯಂನಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ, ಗ್ರಂಥ ಬಿಡುಗಡೆ, ಅತಿಥಿಗಳ ಭಾಷಣ.
ಆರ್‌ಸಿಯು ಬೆಳಗಾವಿಯ ‘ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠ’ ಪ್ರಕಟಿಸಿರುವ “ದೀನ ದಯಾಳು” ಗ್ರಂಥ ಬಿಡುಗಡೆ.
ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್, ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ, ಗುರುದೇವ ಅವರ ಮೊಮ್ಮಗ ದೀಪಕ್ ಆಪ್ಟೆ, ದೀನ್ ದಯಾಳ್ ಉಪಾಧ್ಯಾಯ ಸಂಶೋಧನಾ ಸಂಸ್ಥೆ ನಿರ್ದೇಶಕ ಅತುಲ್ ಜೈನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಆರ್‌ಸಿಯು ಕುಲಪತಿ ಡಾ. ಸಿ.ಎಂ. ತ್ಯಾಗರಾಜ, ಗದಗ ವಿಶ್ವವಿದ್ಯಾಲಯ ಕುಲಪತಿ ಡಾ. ವಿಷ್ಣುಕಾಂತ್ ಚಟ್ಪಲ್ಲಿ, ಬಾಗಲಕೋಟೆ ವಿಶ್ವವಿದ್ಯಾಲಯ ಕುಲಪತಿ ಡಾ. ಆನಂದ್ ದೇಶಪಾಂಡೆ, ಕೆಎಲ್ಎಸ್ ಸದಸ್ಯ-ಕಾರ್ಯದರ್ಶಿ ಸುಧೇಂದ್ರ ವಿ. ಗಣಾಚಾರಿ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಎಸಿಪಿಆರ್ ಅಧ್ಯಕ್ಷ ಹಿರಿಯ ವಕೀಲ ಅಶೋಕ್ ಎಂ. ಪೋತದಾರ್, ಗೌರವ ಕಾರ್ಯದರ್ಶಿ ಮಾರುತಿ ಬಿ. ಝಿರಾಲಿ ಮತ್ತು ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಅವರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ನಗರದ 7 ಬಿ.ಎಡ್ ಕಾಲೇಜುಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿವೆ.



