ಡಾ. ಸೋನಾಲಿ ಪ್ರಾಮಾಣಿಕ ಪರಿಶ್ರಮ: ದೇವಲತ್ತಿ ಲೋಕೋಳಿ- ಲಕ್ಕೇಬೈಲ್ ಮಾರ್ಗದಿಂದ ವಿದ್ಯುತ್ ಸರಬರಾಜು
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯನ್ನು ಕೊನೆಗೂ ಈಡೇರಿಸಿ ಕೊಡುವಲ್ಲಿ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದಾರೆ.
ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದರೂ ಈ ಮಾರ್ಗ ಪದೇ ಪದೇ ದುರಸ್ತಿಗೆ ಈಡಾಗುತ್ತಿರುವುದರಿಂದ ದೇವಲತ್ತಿ ಗ್ರಾಮದವರು ತೀವ್ರ ಸಮಸ್ಯೆ ಅನುಭವಿಸುವಂತಾಗಿತ್ತು. ಈ ಭಾಗದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಪಡಿಪಾಟಲು ಪಡುವಂತಾಗಿತ್ತು. ಹಾಗಾಗಿ ಈ ಜನರ ಸಮಸ್ಯೆ ಬಗ್ಗೆ ತಿಳಿದು ಜನರ ನೋವಿಗೆ ಸ್ಪಂದಿಸಿದ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಈ ಬಗ್ಗೆ ಇಂಧನ ಸಚಿವ ಸುನೀಲ ಕುಮಾರ ಅವರಿಗೆ ಈ ಬಗ್ಗೆ ಪತ್ರ ಬರೆದು ಮನವಿ ಸಲ್ಲಿಸಿ ದೇವಲತ್ತಿ ಗ್ರಾಮಕ್ಕೆ ಈಗ ಇರುವ ಗರ್ಲಗುಂಜಿ ವಿದ್ಯುತ್ ಮಾರ್ಗವನ್ನು ಬದಲಾಯಿಸಿ ಲೋಕೋಳಿ- ಲಕ್ಕೇಬೈಲ್ ಮಾರ್ಗದಿಂದ ದೇವಲತ್ತಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವಂತೆ ಕೋರಿದ್ದರು.
ದೇವಲತ್ತಿಯ ಜನರ ಸಂಕಷ್ಟವನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಈ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಇಂಧನ ಸಚಿವರು ಸೂಚನೆ ನೀಡಿದ್ದಾರೆ.
೨೦೨೨ರ ಡಿಸೆಂಬರ್ ೨೭ರಂದು ಡಾ. ಸೋನಾಲಿ ಸನೋಬತ್ ಇಂಧನ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯಪಾಲಕ ಅಭಿಯಂತರರು (ವಿ) ಕಾನೂನು ಪಾಲನೆ ವಿಭಾಗಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
ಗ್ರಾಮೀಣ ವಿಭಾಗದಲ್ಲಿ ನಾಲ್ಕು ಲಿಂಕ್ ಲೈನ್ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ೯೩.೮೮ ಲಕ್ಷದಷ್ಟು ಬಂಡವಾಳ ಬಜೆಟ್ ಕೋರಿಕೆಯನ್ನು ವಲಯ ಕಚೇರಿಗೆ ಸಲ್ಲಿಸಿದ್ದಾರೆ. ಸದರಿ ಹೆಚ್ಚುವರಿ ಬಂಡವಾಳ ಬಜೆಟ್ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮಕ್ಕೆ ಸಂಬಂಧಿಸಿದಂತೆ ಲಿಂಕ್ ಲೈನ್ಗೆ ೧೬.೫೨ ಲಕ್ಷ ಇದರಲ್ಲಿ ಸೇರಿದೆ. ಆಗಾಗಿ ಈ ೧೬.೫೨ ಲಕ್ಷಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಬೆಳಗಾವಿ ವಲಯದ ಮುಖ್ಯ ಅಭಿಯಂತರರು ಹುವಿಸಂಕಂನಿ ಹುಬ್ಬಳ್ಳಿಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದು, ಇದೀಗ ಮೊತ್ತಕ್ಕೆ ಅನುಮೋದನೆ ಸಿಕ್ಕಿರುವುದರಿಂದ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.
ಗ್ರಾಮಸ್ಥರಲ್ಲಿ ಸಂತಸ: ಅಭಿನಂದನೆ:
ದೇವಲತ್ತಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಶೀಘ್ರ ಸ್ಪಂದಿಸಿ ದೇವಲತ್ತಿ ಗ್ರಾಮಕ್ಕೆ ಲೋಕೋಳಿ-ಲಕ್ಕೇಬೈಲ್ ಮೂಲಕ ವಿದ್ಯುತ್ ಸರಬರಾಜು ಮಾಡುವುದಕ್ಕೆ ಮುಂದಾಗಿರುವ ಕಾರ್ಯದ ಬಗ್ಗೆ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದ್ದು, ಈ ಕಾರ್ಯದಲ್ಲಿ ಮುತುವರ್ಜಿ ವಹಿಸಿದ ಡಾ. ಸೋನಾಲಿಯವರಿಗೆ ಅಭಿನಂದಿಸಿದ್ದಾರೆ.
ಇದೇ ಕಾರಣಕ್ಕೆ ಮಾ. ೧೦ ಶುಕ್ರವಾರ ಸಂಜೆ ದೇವಲತ್ತಿ ಗ್ರಾಮದಲ್ಲಿ ದೇವಲತ್ತಿ ಮತ್ತು ಕಾಮಶಿನಕೊಪ್ಪ ಗ್ರಾಮಸ್ಥರು ಡಾ. ಸೋನಾಲಿ ಸರ್ನೋಬತ್ ಅವರನ್ನು ಸತ್ಕರಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ