ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಮೂರನೇ ಅಲೆ ಇನ್ನೂ ಪೀಕ್ ಹಂತ ತಲುಪಿಲ್ಲ. ಆದರೂ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವೈದ್ಯರು, ದಾದಿಯರೂ ಸೋಂಕಿತರಾಗುತ್ತಿರುವುದು ಆತಂಕ ತಂದಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದರು.
ಕೋವಿಡ್ ರೂಲ್ಸ್ ಈ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ. ಸಧ್ಯಕ್ಕೆ ಲಾಕ್ ಡೌನ್ ವಿಚಾರವಿಲ್ಲ. ಲಾಕ್ ಡೌನ್ ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೀಡಾಗುತ್ತಾರೆ. ಹಾಗಾಗಿ ಲಾಕ್ ಡೌನಿಂದ ಸೋಂಕು ನಿಯಂತ್ರಣ ಮಾಡಲಾಗದು ಮುಖ್ಯಮಂತ್ರಿಗಳ ಸಭೆಯಲ್ಲಿಯೂ ಪ್ರಧಾನಿ ಮೋದಿಯವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನಜಂಗುಳಿಯಾಗದಂತೆ, ಸಭೆ, ಸಮಾರಂಭ ಮಾಡದಂತೆ ಸೂಚಿಸಿದ್ದಾರೆ. ಅಲ್ಲದೇ ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಪಾಲಿಸುವಂತೆ ಹೇಳಿದ್ದಾರೆ ಎಂದರು.
ಲಸಿಕೆ ಬಗ್ಗೆ ಜನರಿಗೆ ನಿರ್ಲಕ್ಷ ಬೇಡ. ಎಲ್ಲರೂ ಕಡ್ಡಾಯವಾಗಿ ಎರಡನೇ ಡೋಸ್ ಲಸಿಕೆ ಪಡೆಯಬೇಕು. ಕೊರೊನಾ ಮೂರನೇ ಅಲೆ ಇನ್ನೂ ಪೀಕ್ ಗೆ ಹೋಗಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಪೀಕ್ ಹಂತ ತಲುಪಲಿದೆ. ಫೆಬ್ರವರಿ 3-4ನೇ ವಾರದಲ್ಲಿ ಕೋವಿಡ್ ಕೇಸ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಪ್ರಸ್ತುತ ಶೇ.5ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ವೈದ್ಯರೂ, ದಾದಿಯರೂ ಕೂಡ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ತಂದಿದೆ. ಎರಡನೇ ಅಲೆ ಸಂದರ್ಭದಲ್ಲಿ ಆದ ಪರಿಸ್ಥಿತಿ ಮತ್ತೆ ಮರುಕಳಿಸಬಾರದು ಈ ನಿಟ್ಟಿನಲ್ಲಿ ಸೋಂಕು ನಿಯಂತ್ರಣಕ್ಕೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ