
ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ವೇಳೆ ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್ ಉನ್ ನಬಿ ಎನ್ನುವುದು ವಿಧಿವಿಜ್ಞಾನ ಪರೀಕ್ಷಾ ವರದಿಯಿಂದ ಬಹಿರಂಗಗೊಂಡಿದೆ.
ಡಾ. ಉಮರ್ ಅವರ ತಾಯಿಯ ಡಿಎನ್ಎ ಮಾದರಿಗಳು, ಸ್ಫೋಟದ ಸ್ಥಳದಿಂದ ವಶಪಡಿಸಿಕೊಂಡ ಮೂಳೆಗಳು ಮತ್ತು ಹಲ್ಲುಗಳಿಂದ ಹೊರತೆಗೆಯಲಾದ ಡಿಎನ್ಎ ಮಾದರಿಗಳೊಂದಿಗೆ ಹೊಲಿಕೆಯಾದ ಬಳಿಕ ಈ ವಿಷಯ ದೃಢಪಟ್ಟಿದೆ.
ಈ ಮಾದರಿಗಳನ್ನು ಏಮ್ಸ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಿಶ್ಲೇಷಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದೆಹಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಉಮರ್ ನಬಿ ಶ್ರೀನಗರದಿಂದ ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪಡೆದು 2023ರಲ್ಲಿ ಕಾಶ್ಮೀರದ ಅನಂತ್ನಾಗ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್ಆರ್ ಆಗಿ ಕೆಲಸ ಮಾಡುತ್ತಿದ್ದ.
ಪುಲ್ವಾಮಾದ ಕೊಯಿಲ್ ಗ್ರಾಮದ ಅವರ ಸಂಬಂಧಿಕರ ಪ್ರಕಾರ, ಡಾ. ಉಮರ್ ಶಾಂತ ಸ್ವಭವಾದ ವ್ಯಕ್ತಿ ಎನ್ನಲಾಗಿದ್ದು, ಅವನಿಗೆ ಓದೇ ಪ್ರಪಂಚವಾಗಿತ್ತು ಎಂದಿದ್ದಾರೆ. ಪೊಲೀಸ್ ಮೂಲಗಳು ಹೇಳುವ ಪ್ರಕಾರ, ಉಮರ್ ನ ಇತ್ತೀಚಿನ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿತ್ತು. ಅವನು ಫರಿದಾಬಾದ್ ಮತ್ತು ದೆಹಲಿ ನಡುವಿ ಪ್ರಯಾಣವನ್ನು ಹೆಚ್ಚು ಮಾಡಿದ್ದನಂತೆ.
ರಾಮಲೀಲಾ ಮೈದಾನ ಮತ್ತು ಸುನೇಹ್ರಿ ಮಸೀದಿಗಳಿಗೆ ಭೇಟಿ ನೀಡುತ್ತಿದ್ದ. ಉಮರ್ ಕೆಲಸ ವಿಷಯದಲ್ಲಿ ಕೆಟ್ಟ ಉದ್ಯೋಗಿಯಾಗಿಯೇ ಕಾಣಿಸಿಕೊಂಡಿದ್ದು, ದಿನೇ ದಿನೇ ಒಂದಿಲ್ಲೊಂದು ದೂರುಗಳು ಬರುತ್ತಲೇ ಇದ್ದವು. ಸಹ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ರೋಗಿಗಳು ಕೂಡ ಉಮರ್ನ ಅಸಭ್ಯ ಹಾಗೂ ಅಜಾಗರೂಕತೆ ಬಗ್ಗೆ ಆರೋಪಿಸುತ್ತಿದ್ದರು. ಅಲ್ಲದೇ ಉಮರ್ ಕೂಡ ಹೆಚ್ಚಿನ ಸಮಯ ಆಸ್ಪತ್ರೆಗೆ ಗೈರಾಗಿಯೇ ಇರುತ್ತಿದ್ದ ಎನ್ನಲಾಗಿದೆ.



