Karnataka NewsLatestPolitics

*15 ದಿನದಲ್ಲಿ ಕೇಂದ್ರಕ್ಕೆ ಸಲ್ಲಿಸಲು ಬರ ಪರಿಸ್ಥಿತಿ ವರದಿ ಸಿದ್ಧಪಡಿಸಿ: ಅಧಿಕಾರಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ನಿರ್ದೇಶನ*

178 ತಾಲೂಕುಗಳಲ್ಲಿ ಮಳೆ ಕೊರತೆ

ಪ್ರಗತಿವಾಹಿನಿ ಸುದ್ದಿ: “ರಾಜ್ಯದಲ್ಲಿ ಮಳೆ ಕೊರತೆ, ಬರ ಪರಿಸ್ಥಿತಿ ಕುರಿತು ಮುಂದಿನ 15 ದಿನಗಳಲ್ಲಿ ಕೇಂದ್ರಕ್ಕೆ ಸಲ್ಲಿಸಲು ಸಮರ್ಪಕ ವರದಿ ಸಿದ್ಧಪಡಿಸಿ. ಸ್ಥಳ ಪರಿಶೀಲನೆ ಮಾಡಿ ವರದಿ ರೂಪಿಸಬೇಕು, ಕಚೇರಿಯಲ್ಲಿ ಕೂತು ತಯಾರಿಸಬಾರದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತ ಜಿಲ್ಲಾಧಿಕಾರಿ ಹಾಗೂ ಸಿಇಒ ಸಭೆ ಹಾಗೂ ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಭಾನುವಾರ ಮಾತನಾಡಿದರು.

“ನಮ್ಮ ವರದಿ ಬಳಿಕ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿದಾಗ ಅವರಿಗೆ ನಿಖರವಾಗಿ ಮಾಹಿತಿ ನೀಡಬೇಕು. ಕೇಂದ್ರ ತಂಡ ಕಳುಹಿಸುವ ಬಗ್ಗೆ ಈಗಾಗಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.

Home add -Advt

“ಇಂದು ಬರದ ಪರಿಸ್ಥಿತಿ ಕುರಿತು ವಿವಿಧ ಇಲಾಖೆಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ಎಲ್ಲರೂ ಒಟ್ಟಾಗಿ ಟೀಮ್ ಕರ್ನಾಟಕವಾಗಿ ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ರಾಜ್ಯದಲ್ಲಿ 60% ಮಳೆ ಕೊರತೆ ಎದುರಾಗಿದ್ದು, 178 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದು, 158 ತಾಲೂಕುಗಳಲ್ಲಿ ತೀರಾ ಸಾಧಾರಣ ಮಳೆಯಾಗಿದೆ. 20 ತಾಲೂಕುಗಳಲ್ಲಿ ಮಳೆ ಆಗಿಲ್ಲ. ವಿಜಯನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಈ ಎಲ್ಲಾ ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯದ ಜಲಾಶಯ 40% ಮಾತ್ರ ನೀರು ಶೇಖರಣೆಯಾಗಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಬಳಸಲಾಗುವುದು” ಎಂದು ವಿವರಿಸಿದರು.

“ಅಣೆಕಟ್ಟುಗಳಲ್ಲಿ ನೀರು ಬಂದರೆ ಮಾತ್ರ ಸಮಿತಿಗಳು ಸಭೆ ಮಾಡಬೇಕು. ನೀರಿನ ಪ್ರಮಾಣದ ಬಗ್ಗೆ ಸಮಿತಿಯವರು ಆಗಾಗ್ಗೆ ರೈತರಿಗೆ ಮನದಟ್ಟು ಮಾಡಬೇಕು. ಬೆಳೆ ಹಾಕಿ ನೀರು ಬಿಡಿ ಎಂದರೆ ಬಿಡಲು ಕಷ್ಟವಾಗುತ್ತದೆ. ಹೀಗಾಗಿ ಬೆಳೆ ಹಾಕಬಾರದು ಎಂದು ಮನವಿ ಮಾಡುತ್ತೇವೆ” ಎಂದರು.

“ಜಲ ವಿದ್ಯುತ್ ಕೇವಲ 23% ಮಾತ್ರ ಇದೆ. ಎಲ್ಲಾ ತಾಲೂಕುಗಳಲ್ಲಿ ಅಂತರ್ಜಲ ಪ್ರಮಾಣದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿದೆ. 3,817 ಸಣ್ಣ ನೀರಾವರಿ ಕೆರೆಗಳ ಪೈಕಿ, 3,235 ಕೆರೆಗಳಲ್ಲಿ 50%ಗಿಂತ ಕಡಿಮೆ ನೀರಿದೆ. 32,504 ಜಿಲ್ಲಾ ಪಂಚಾಯ್ತಿ ಕೆರೆಗಳ ಪೈಕಿ, 27,450 ಕೆರೆಗಳಲ್ಲಿ 50%ಗಿಂತ ಕಡಿಮೆ ನೀರಿದೆ. ಈಗಾಗಲೇ ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿಗಾಗಿ ತಲಾ ₹1 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. 379 ಕೋಟಿ ಹಣವನ್ನು ನೀಡಲಾಗಿದೆ. ಹಣದ ಕೊರತೆ ಇಲ್ಲ. ಶಾಸಕರ ನೇತೃತ್ವದಲ್ಲಿ ಸಭೆ ಮಾಡಿ ಹಣ ಬಳಕೆಗೆ ಸೂಚಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ಮನರೇಗಾ ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೂ ವಿಬಿ ಗ್ರಾಮ್ ಜಿ ಯೋಜನೆಯಲ್ಲಿ 40% ಅನುದಾನವನ್ನು ರಾಜ್ಯ ಸರ್ಕಾರ ಹಾಕಬೇಕಿದೆ. ಕೇಂದ್ರ ಸರ್ಕಾರ ಯಾವೆಲ್ಲ ಯೋಜನೆ ಕೈಗೊಳ್ಳಬಹುದು ಎಂದು ತಿಳಿಸಿದ್ದು, ಆದಷ್ಟು ಸಮುದಾಯ, ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು” ಎಂದರು.

“ಯಾವ ಭಾಗದ ಜನರು ವಲಸೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಮೇವು, ಗೊಬ್ಬರ ಪೂರೈಕೆಗೆ ಸೂಚನೆ ನೀಡಲಾಗಿದೆ. ಪ್ರತಿ ಕೊಳವೆ ಬಾವಿ ಕೊರೆಯುವಾಗ ನಕಲಿ ಬಿಲ್ ಗಳು ಬಾರದಂತೆ ನೋಡಿಕೊಳ್ಳಬೇಕು. ಕೊಳವೆ ಬಾವಿ ಕೊರೆಯುವಾಗ ವಿಡಿಯೋ ದಾಖಲೆ ಇರಬೇಕು. ವಿದ್ಯುತ್ ಇಲಾಖೆಯವರು ಟ್ರಾನ್ಸ್ಫಾರ್ಮರ್ ರಿಪೇರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ” ಎಂದರು.

“ಅಧಿಕಾರಿಗಳು ಕೇಂದ್ರ ಪ್ರದೇಶದಲ್ಲಿ ಇರಬೇಕು. ಯಾವುದೇ ಕೆಲಸ ಆಗಬೇಕಾದರೂ ಖುದ್ದಾಗಿ ಇರಬೇಕು ಎಂದು ಸೂಚಿಸಿದ್ದೇನೆ. ಬೆಳೆ ವಿಮೆ ವಿಚಾರವಾಗಿ ಎಲ್ಲೆಲ್ಲಿ ಅನ್ಯಾಯ ಆಗಿದೆ ಎಂದು ಪ್ರತ್ಯೇಕ ಸಭೆ ಮಾಡಿ ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

Related Articles

Back to top button