ಸಂತೋಷಕುಮಾರ ಕಾಮತ್, ಮಾಂಜರಿ – ಸಮೀಪದ ಅಂಕಲಿ ಗ್ರಾಮದಲ್ಲಿನ ಜಾನುವಾರುಗಳ ಮಾರುಕಟ್ಟೆಯಲ್ಲಿ ಅತಿವೃಷ್ಟಿಯಿಂದಾಗಿ ಮೇವು ಕೊರತೆಯಿಂದ ರೈತರು ಜಾನುವಾರುಗಳ ಮಾರಾಟ ಮಾಡಲು ಮುಂದಾಗಿದ್ದು, ಇತ್ತಿಚಿನ ದಿನಗಳಲ್ಲಿ ವಹಿವಾಟು ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದೆ.
ಪ್ರಸಕ್ತ ಸಾಲಿನ ಭೀಕರ ಪ್ರವಾಹ ನದಿ ತೀರದ ಜನರ ಬದುಕು ಕಸಿದುಕೊಂಡು ಹೋಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆ ದೋರಿದೆ. ಜಮೀನುಗಳಲ್ಲಿದ್ದ ಮೇವು ಮಹಾಪೂರದಲ್ಲಿ ಕೊಚ್ಚಿ ಹೋಗಿದೆ. ಕಬ್ಬಿನ ಬೆಳೆ ಕೊಳೆತು ದುರ್ನಾತ ಬರುತ್ತಿದೆ.
ನದಿ ತೀರದ ಹುಲ್ಲಿನ ಗದ್ದೆಗಳು ಸಂಪುರ್ಣ ನಾಶವಾಗಿದೆ. ಹೀಗಾಗಿ ಜಾನುವಾರು ಹೊಟ್ಟೆ ತುಂಬಿಸುವುದು ನದಿ ತೀರದ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದರಿಂದ ಮಧ್ಯಮ ಮತ್ತು ಬಡ ರೈತರು ಮಾರಾಟಕ್ಕೆ ಮುಂದಾಗಿದ್ದಾರೆ.
ಅಲ್ಪಸ್ವಲ್ಪ ಇದ್ದ ಕಬ್ಬನ್ನು ಕಟಾವು ಮಾಡಿ ಜಾನುವಾರುಗಳಿಗೆ ಹಾಕಬೇಕು ಎಂದರೆ ಮೇವು ದರ್ನಾತ ವಾಸನೆ ಬರುವುದರಿಂದ ದನಕರುಗಳು ತಿನ್ನುತ್ತಿಲ್ಲ, ಮಳೆಯಾಶ್ರಿತ ಪ್ರದೇಶಗಳಿಗೆ ತೆರಳಿ ಮೇವು ತರುವ ಪ್ರಸಂಗ ಬಂದೊದಗಿದೆ. ಪಶು ಖಾದ್ಯವೂ ದುಬಾರಿಯಾಗಿದೆ.
ಇದರಿಂದಾಗಿ ಮಾರಾಟ ಮಾಡುವುದೆ ಸೂಕ್ತ. ಜಾನುವಾರಗಳಿಗೆ ಮೇವಿನ ಸಮಸ್ಯೆ ಮಾತ್ರ ನೀಗುತ್ತಿಲ್ಲ, ಹೇಗಾದರೂ ಮಾಡಿ ನಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ, ಆದರೆ ಜಾನುವಾರುಗಳ ಪರಿಸ್ಥಿತಿ ಹೇಗೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ ಎನ್ನುತ್ತಿದ್ದಾರೆ ರೈತರು.
ನದಿ ತೀರದ ಜಮೀನುಗಳಲ್ಲಿ ಬಹಳಷ್ಟು ಕಡೆಗಳಲ್ಲಿ ನೀರು ಆವರಿಸಿಕೊಂಡಿದೆ. ಕೆಲವೊಂದು ಪ್ರದೇಶಗಳಲ್ಲಿ ಕೆಸರು ತುಂಬಿಕೊಂಡಿದೆ. ಹೀಗಾಗಿ ರೈತರು ಜಮೀನುಗಳ ಕಡೆ ಹೋಗುವ ಪರಿಸ್ಥಿತಿ ಇಲ್ಲ. ಇಂತಹ ಸನ್ನಿವೇಶದಲ್ಲಿ ದನಕರುಗಳ ಹೊಟ್ಟೆ ಪಾಡೇನು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.
ನದಿ ತೀರದ ಪ್ರತಿಯೊಂದು ಗ್ರಾಮದ ರೈತರು ಒಕ್ಕಲುತನದ ಜೊತೆಗೆ ಹೈನುಗಾರಿಕಾ ಉದ್ಯಮ ಮಾಡುತ್ತಿದ್ದಾರೆ.
ಆದರೆ ಪ್ರಸಕ್ತ ಸಾಲಿನಲ್ಲಿ ಬಂದ ಪ್ರವಾಹದಿಂದಾಗಿ ಜಾನುವಾರುಗಳ ಪರಿಸ್ಥಿತಿಯನ್ನು ನೋಡಿ ಎಮ್ಮೆಗಳನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮೇವು ಕೊರತೆಯಿಂದ ಎಮ್ಮೆಗಳು ಕಡಿಮೆ ಹಾಲು ಹಿಂಡುತ್ತಿವೆ. ಇದರಿಂದಾಗಿ ರೈತರ ಆರ್ಥಿಕ ಪರಿಸ್ಥಿತಿ ಮೇಲೂ ವಿಪರೀತ ಪರಿಣಾಮ ಬಿರಿದೆ.
ಜಾನುವಾರುಗಳ ಪರಿಸ್ಥಿತಿ ನೋಡಿ ಜೀವ ಮರ-ಮರ ಮರುಗುತ್ತಿದೆ, ಅಲ್ಲಲ್ಲಿ ಸುತ್ತಾಡಿ ಕೈ-ಕಾಲು ಹಿಡಿದು ಮೇವು ತರುವ ಪ್ರಸಂಗ ಬಂದೂದಗಿದೆ. ತಾಲೂಕಿನಲ್ಲಿ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ, ಮತ್ತು ಚಿಕೋತ್ರಾ ನದಿಗಳ ಕೃಪಾಕಟಾಕ್ಷದಿಂದ ನದಿತೀರದ ರೈತರಿಗೆ ಅಲ್ಪ-ಸ್ವಲ್ಪ ಮೇವುಸಿಗುತ್ತಿತ್ತು.
ಆದರೆ ಪ್ರಸಕ್ತ ಸಾಲಿನ ಭೀಕರ ಬರಗಾಲ, ಪ್ರವಾಹ ಮತ್ತು ಕಳೆದ ೮-೧೦ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೇವಿನ ಜೊತೆಗೆ ಎಲ್ಲವನ್ನು ನುಂಗಿ ಬಿಟ್ಟು ನಮ್ಮನ್ನು ಅರ್ಥಿಕವಾಗಿ ಕಂಗಾಲನ್ನಾಗಿಸಿದೆ ಎಂದು ರೈತರ ಅಭಿಪ್ರಾಯವಾಗಿದೆ.
ಅಂಕಲಿ ಮಾರುಕಟ್ಟೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಗ್ರಾಮಗಳ ರೈತರು ಜಾನುವಾರುಗಳನ್ನು ತಂದು ಮಾರಾಟ ಮಾಡಲು ಆಗಮಿಸುತ್ತಿರುವುದರಿಂದ. ಕಳೆದ ಮೂರು ತಿಂಗಳಿಂದ ಕಡಿಮೆಯಾದ ವಹಿವಾಟು ಮಾರುಕಟ್ಟೆಯಲ್ಲಿ ಇಂದು ಹೆಚ್ಚಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ