ಪ್ರಗತಿವಾಹಿನಿ ಸುದ್ದಿ; ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಮತ್ತೆ ಎನ್ ಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.
ಐಶಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್, ಅರ್ಬಾಜ್ ಹಾಗೂ ಮುನ್ ಮುನ್ ದಮೇಚಾಳನ್ನು ಬಂಧಿಸಲಾಗಿದ್ದು, ಮೂವರನ್ನು ಎನ್ ಸಿಬಿ ಅಧಿಕಾರಿಗಳು ಇಂದು ಮುಂಬೈ ಕಿಲ್ಲಾ ಕೋರ್ಟ್ ಗೆ ಹಾಜರುಪಡಿಸಿದ್ದರು.
ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಆರ್ಯನ್ ಖಾನ್ ಸೇರಿ ಮೂವರನ್ನು ಕಸ್ಟಡಿಗೆ ನೀಡುವಂತೆ ಎನ್ ಸಿಬಿ ಪರ ವಕೀಲ ಎಎಸ್ ಜಿ ಅನಿಲ್ ಸಿಂಗ್ ವಾದ ಮಂಡಿಸಿದರು.
ಎನ್ ಡಿ ಪಿಎಸ್ ಕಾಯ್ದೆಯಡಿ ಇದು ಜಾಮೀನು ರಹಿತ ಪ್ರಕರಣವಾಗಿದ್ದು, ಶಿಪ್ ಮೇಲೆ ದಾಳಿ ನಡೆಸಿದ್ದ ವೇಳೆ ಹಲವು ಡ್ರಗ್ಸ್ ಗಳು ಪತ್ತೆಯಾಗಿವೆ. ಅಲ್ಲದೇ ಪ್ರಕರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಶಂಕೆ ಇದೆ. ಡ್ರಗ್ಸ್ ಖರೀದಿ ಬಗ್ಗೆ ಆರ್ಯನ್ ಮೊಬೈಲ್ ನಲ್ಲಿ ಚಾಟ್ ಮಾಡಿರುವುದು ತಿಳಿದುಬಂದಿದೆ. ಕೋಡ್ ವರ್ಡ್ ಗಳನ್ನು ಬಳಸಿ ಚಾಟಿಂಗ್ ನಡೆಸಿದ್ದಾನೆ. ಈ ಎಲ್ಲಾ ಕಾರಣಕ್ಕೆ ಹೆಚ್ಚಿನ ತನಿಖೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಅ.11ರವರೆಗೆ ಆರ್ಯನ್ ಸೇರಿದಂತೆ ಮೂವರನ್ನು ಎನ್ ಸಿಬಿ ಕಸ್ಟಡಿಗೆ ನೀಡುವಂತೆ ವಾದ ಮಂಡಿಸಿದರು.
ಸುದೀರ್ಘ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಅಕ್ಟೋಬರ್ 7ರವರೆಗೆ ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಮೂವರು ಆರೋಪಿಗಳನ್ನು ಎನ್ ಸಿಬಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶ ನೀಡಿದೆ.
ದೇವರ ಪ್ರಸಾದವೆಂದು ಡ್ರಗ್ಸ್ ಮಾರಾಟ; ಎನ್ ಸಿಬಿ ಬಲೆಗೆ ಬಿದ್ದ ಮಾಜಿ ಪೊಲೀಸ್ ಅಧಿಕಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ