ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಔಷಧ ನಿಯಂತ್ರಣಾಧಿಕಾರಿಗಳನ್ನೊಳಗೊಂಡ ತಂಡವು ಖಚಿತ ಮಾಹಿತಿ ಆಧರಿಸಿ ಕಾಕತಿಯ ಲಕ್ಷ್ಮೀ ನಗರದಲ್ಲಿರುವ ಎರಡು ಪರವಾನಗಿರಹಿತ ಕಾಂತಿವರ್ಧಕ ತಯಾರಿಕಾ ಘಟಕ ಹಾಗೂ ಬೆಳಗಾವಿ ನಗರದ ಎರಡು ಕಾಂತಿವರ್ಧಕ ಮಾರಾಟಗಾರರ ಮೇಲೆ ದಾಳಿ ನಡೆಸಿದೆ.
ಆಂಟಿಬಯೋಟಿಕ್, ಸ್ಟಿರಾಯ್ಡ್ ಔಷಧಗಳ ಕಲಬೆರಕೆಯೊಂದಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಹಾನಿಕಾರಕವಾಗುವಂತಹ ಕಾಂತಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಕತಿಯ ೬ನೇ ಅಡ್ಡ ರಸ್ತೆಯ ಫಜಲುಲ್ಲಾ ಫಾರೂಕಿ ಎಂಬುವವರು ಅವರ ಮನೆಯಲ್ಲಿ ಅನಧೀಕೃತವಾಗಿ ತಯಾರಿಸಿದ್ದ ಫಾರೂಖಿ ಅರಬಿ ಕ್ರೀಮ್ ಗಳನ್ನು ಹಾಗೂ ಯಂತ್ರೋಪಕರಣಗಳನ್ನು, ಪ್ಯಾಕಿಂಗ್ ಮಟೀರಿಯಲ್‌ಗಳು, ಲೇಬಲ್‌ಗಳು, ಪ್ಲಾಸ್ಟಿಕ್ ಡಬ್ಬ್ಬಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಕತಿಯ ೩ನೇ ಅಡ್ಡ ರಸ್ತೆಯ ಜಹೀದಾಬಾನು ಬೇಪಾರಿ ಅವರ ಮನೆಯಲ್ಲೂ ಸಹ ಅನಧೀಕೃತವಾಗಿ ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್ ಗಳನ್ನು ತಯಾರಿಸಿರುವುದು ಹಾಗೂ ಆಲೋಪಥಿ ಔಷಧಗಳು, ಯಂತ್ರೋಪಕರಣಗಳು, ಪ್ಯಾಕಿಂಗ್ ಮಟೀರಿಯಲ್‌ಗಳು, ಲೇಬಲ್‌ಗಳು, ಪ್ಲಾಸ್ಟಿಕ್ ಡಬ್ಬಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಖಚಿತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.
ಬೆಳಗಾವಿಯ ದರಬಾರ ಗಲ್ಲಿಯಲ್ಲಿನ ಬೈಟುಜಾರಾ ಕಾಂಪ್ಲೆಕ್ಸ್ ನ ಫಾರೂಕಿ ಅರಬಿ ಕ್ರೀಮ್ ಶಾಪ್ ಹಾಗೂ ಕೋನವಾಲ ಗಲ್ಲಿಯ ರಂಗರೇಜ ಜನರಲ್ ಸ್ಟೋರ‍್ಸ್ ನಲ್ಲಿ ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದ ಫಾರೂಖಿ ಅರಬಿ ಕ್ರೀಮ್ ಹಾಗೂ ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್ ಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ.
ನಾಲ್ಕೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಾಂತಿವರ್ಧಕ, ಔಷಧ ಹಾಗೂ ಇತರೆ ಸಾಮಗ್ರಿಗಳನ್ನು ಅಧಿಕಾರಿಗಳ ಸ್ವಾಧೀನದಲ್ಲಿಟ್ಟುಕೊಳ್ಳಲು ಬೆಳಗಾವಿಯ ೨ನೇ ಹಾಗೂ ೪ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.
ಫಾರೂಖಿ ಅರಬಿ ಕ್ರೀಮ್ ಹಾಗೂ ಜಹಿದಾಸ್ ಒರಿಜಿನಲ್ ಅರೆಬಿಕ್ ಕ್ರೀಮ್ ಗಳನ್ನು ಫಜಲುಲ್ಲಾ ಫಾರೂಕಿ ಹಾಗೂ ಜಾಹೀದಾಬಾನು ಬೇಪಾರಿ ರವರುಗಳು ಆಲೋಪಥಿಕ್ ಔಷಧಗಳನ್ನು ಬೆರೆಸಿ ಕ್ರೀಮ್‌ಗಳನ್ನು ತಯಾರಿಸಿರುವ ಹಾಗೂ ಕ್ರೀಮ್‌ಗಳನ್ನು ಜೋಳದ ಹಿಟ್ಟು, ಕಡಲೆ ಹಿಟ್ಟು, ಅರಿಷಿನ ಪುಡಿಗಳನ್ನು ಬೆರೆಸಿ ತಯಾರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪೊಲೀಸರು ದಾಳಿಗೆ ಸಹಕಾರ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ