ನವರಾತ್ರಿ ಮಹೋತ್ಸವ -ಸಮಗ್ರ ಮಾಹಿತಿಯ ಲೇಖನ
ವಿದ್ವಾನ್ ಅರುಣ ಹೆಗಡೆ, ದೇವಿಮನೆ, ಬೆಳಗಾವಿ (ಮೊಬೈಲ್ -9880217765)
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ .
ದುಷ್ಟ ದಾನವ ಹರಣಕ್ಕಾಗಿ, ಶಿಷ್ಟಜನ ಪರಿಪಾಲನೆಗಾಗಿ, ಆದಿಶಕ್ತಿಯು ಶ್ರೀ ಮಹಾಕಾಲೀ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತೀ – ಎಂಬ ತ್ರಿಸ್ವರೂಪಗಳಿಂದ ಸಪ್ತ ಮಾತೃಕಾ ರೂಪಗಳಿಂದ, ನವದುರ್ಗಾರೂಪಗಳಿಂದ, ಬೇರೆಬೇರೆಯೇ ಕಾಲಗಳಲ್ಲಿ ಅವತರಿಸಿ, ಲೋಕಹಿತ ಕಾರ್ಯಗಳನ್ನು ಮಾಡಿದುದರ ನಿರಂತರ ನೆನಹಿಗಾಗಿ, ಆ ಅವತಾರ ವಿಶೇಷಗಳನ್ನು, ಭಗವದ್ಭಕ್ತರು ಪ್ರತಿ ವರ್ಷವೂ ಅಶ್ವಯುಜ ಮಾಸದ ಶುದ್ಧ ಪ್ರತಿಪದೆಯಿಂದ ನವಮಿಯ ತನಕ ಸತತ ಒಂಬತ್ತು ದಿವಸಗಳ ರಾತ್ರಿಗಳಲ್ಲಿ ಏಕತ್ರವಾಗಿ ಪೂಜಿಸುತ್ತ ಬರುವುದು ಕಂಡುಬರುತ್ತದೆ. ನವರಾತ್ರಿ ಕಾಲದಲ್ಲಿ ನಡೆಸಲ್ಪಡುವ ಈ ಭಗವತೀ ಆರಾಧನೆಯು ವೈಶಿಷ್ಟ್ಯಪೂರ್ಣವಾಗಿದೆ. ಈ ವಿಶಿಷ್ಟತೆಗಳ ಮೂಲಕ ನಾವು ಆದಿಶಕ್ತಿ ಮಾಹಾಮಾಯೆಯ ಮೇಲ್ಮೈಯನ್ನು ಅರ್ಥವಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ – ನವರಾತ್ರಿ ಉತ್ಸವ… ಬಣ್ಣದ ಉತ್ಸವ
“ನವರಾತ್ರಿ” ಎಂದರೆ ಒಂಬತ್ತು ರಾತ್ರಿಗಳು, ಹೊಸ ರಾತ್ರಿಗಳು ಎಂದು ಅರ್ಥವಾಗಿದೆ, ನವ(ಒಂಬತ್ತು) ಎಂಬ ಸಂಖ್ಯೆಯು ಸಂಖ್ಯೆಗಳಲ್ಲಿ ಕೊನೆಯದಾಗಿದೆ. ಅದನ್ನು ಎಷ್ಟುಪಟ್ಟು ವರ್ಧಿಸಿದರೂ, ಬಂದ ಗುಣಲಬ್ಧವನ್ನು ಕೂಡಿಸಿ ಏಕಸ್ಥಾನಕ್ಕೆ ತಂದಾಗ ಅದು ಒಂಬತ್ತೇ ಆಗುವುದು ಈ ಸಂಖ್ಯೆಯ ವಿಶೇಷತೆಯಾಗಿದೆ. (ಉದಾ-೯*೧=೯;೯*೨=೧೮(೧+೮=೯);೯*೩= ೨೭(೭+೨=೯)ಇತ್ಯಾದಿ) ಶ್ರೀ ದುರ್ಗಾಂಬಿಕೆಯ ಮೇಲ್ಮೆಯೂ ಹಾಗೆಯೇ. ಆಕೆಯು ಯಾವುದೇ, ಎಷ್ಟೇ ಅವತಾರಗಳನ್ನು ತಾಳಿದರೂ ಕೊನೆಗೆ ಆದಿಶಕ್ತಿಯಾಗಿಯೇ ಇರುತ್ತಾಳೆ. ಪ್ರಧಾನದೀಪವೊಂದರಿಂದ ಹಲವಾರು ದೀಪಗಳು ಉರಿಸಲ್ಪಟ್ಟರೂ ಮೂಲದ ದೀಪ್ತಿಯೂ ಹಾಗೆಯೇ ಇರುವಂತೆ, ಎಷ್ಟೆಷ್ಟು ಅವತಾರಗಳನ್ನು ಹೊಂದಿದರೂ, ಆದಿಶಕ್ತಿಯು ಮೊದಲಿನಂತೆಯೇ ದೇದೀಪ್ಯಮಾನವಾಗಿರುತ್ತಾಳೆ.
ವರ್ಷದ ಮುನ್ನೂರ ಅರವತ್ತೈದು ರಾತ್ರಿಗಳಲ್ಲಿ ಅಶ್ವಯುಜ ಮಾಸದ ಶುಕ್ಲಪ್ರತಿಪದೆಯಂದು ಮೊದಲ್ಗೊಂಡು ನವಮಿಯವರೆಗಿನ ಒಂಬತ್ತು ರಾತ್ರಿಗಳನ್ನು ಮಾತ್ರ ‘ನವರಾತ್ರಿ’ ಯೆಂದು ವಿಶೇಷವಾಗಿ ಹೆಸರಿಸುತ್ತಿರುವುದರಿಂದಲೂ, ಈ ನವ-ರಾತ್ರಿಗಳ ಪೂಜೆಗಳಲ್ಲಿ ಕೆಲ ಕೆಲವು ವೈಶಿಷ್ಟ್ಯಗಳು ವ್ಯಕ್ತವಾಗುವುದರಿಂದಲೂ, ಬೇರೆ ಬೇರೆ ಸಂದರ್ಭಗಳಲ್ಲಾದ ದುರ್ಗಾವತಾರಗಳನ್ನು ಒಗ್ಗೂಡಿಸಿ ಸಮಷ್ಟಿಯಾಗಿ ಅರ್ಚಿಸುವ ‘ಹೊಸತನ’(ವಿಶೇಷಕ್ರಮ) ಇರುವುದರಿಂದಲೂ, ನವ(ಹೊಸತನವಿರುವ) ರಾತ್ರಿ- ಎನ್ನುವ ಹೆಸರು ಔಚಿತ್ಯಪೂರ್ಣವಾಗಿದೆ.
ದುರ್ಗೆ ಎಂದರೆ ದೇವಿ, ಶಕ್ತಿ, ಪೊರೆಯುವ ತಾಯಿ, ಶಿಕ್ಷಿಸುವ ಚಾಮುಂಡಿ.
‘ನವದುರ್ಗೆ’ಯರು ಎನ್ನುತ್ತೇವೆ. ಇದು ಸಂಖ್ಯಾವಿಶೇಷಣದ ಮಾತು. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ – ಇವು ದುರ್ಗೆಯ ಒಂಬತ್ತು ರೂಪಗಳು. ದುರ್ಗೆಯ ಹಲವು ಅವಸ್ಥೆಗಳನ್ನೂ ಆಯಾಮಗಳನ್ನೂ ಬಿಂಬಿಸಲು ಇವಿಷ್ಟು ಪ್ರಾತಿನಿಧಿಕ ರೂಪಗಳು.
ದೇವ್ಯಾನುಗ್ರಹ ಪ್ರಾಪ್ತಿಗಾಗಿ ಕೈಕೊಳ್ಳುವ ಮಾರ್ಗಗಳು ಎರಡು ರೀತಿಯಾಗಿವೆ. ಒಂದನೆಯದು ಜಪ-ತಪ-ಯೋಗಾದಿಗಳು; ಎರಡನೆಯದು ಪೂಜೆ-ಪಾರಾಯಣ-ಭಜನಾದಿಗಳು ಇವು ಸಾಮಾನ್ಯರಿಗೆ ಇರುವಂತಹವುಗಳು. ಅಸಾಮಾನ್ಯರಿಗೂ ಸಾಮಾನ್ಯರಿಗೂ ಇರುವಂತಹ ಜಪ-ಪೂಜೆಗಳೆರಡಕ್ಕೂ ಭಕ್ತಿಭರಿತವಾದ ಪುರಶ್ಚರಣೆಯೇ ಮುಖ್ಯವಾಗಿದೆ. ನಿಯಮಾನುಸಾರವಾಗಿ ಭಕ್ತಿಯಿಂದ ಮಾಡುವ ಪೂಜೆಯೇ ಜಪ; ಮತ್ತೆ ಮತ್ತೆ ದೇವತಾಸ್ತೋತ್ರರೂಪವಾದ ಮಂತ್ರದ ಪುರಶ್ಚರಣೆ(ಜಪ)ಯೇ ಪೂಜೆ. ಆದುದರಿಂದ ಜಪ- ಪೂಜೆಗಳೆರಡರ ಉದ್ದೇಶವು ಒಂದೇ ಆಗಿದೆ. “ಜ” ಕಾರೋಜನ್ಮವಿಚ್ಛೇದಃ, “ಪ್”ಕಾರ ಪಾಪವಿನಾಶನಮ್, (ಜ-ಪ, ಪೂ-ಜಾಗಳೆಂಬ ಎರಡೂ ಶಬ್ಧಗಳಲ್ಲಿರುವ ಅಕ್ಷರಗಳನ್ನು ಪರಾಂಬರಿಸಬೇಕು.) ಎಂದರೆ,
1. ಜನ್ಮಗಳನ್ನೂ, ಪಾಪಗಳನ್ನೂ ಇಲ್ಲದಂತೆ ಮಾಡಿಕೊಳ್ಳುವುದು,
2. ಪಾಪಗಳ ನಾಶ(ಇಲ್ಲದಾಗಿಸುವಿಕೆ)ದ ಮೂಲಕ ಪುನರ್ಜನ್ಮವು ಇಲ್ಲದಂತೆ ಮಾಡಿಕೊಳ್ಳುವುದು.
ಜಪ-ಪೂಜಾದಿಗಳು ಈ ಆಧ್ಯಾತ್ಮ ಮಾರ್ಗದಲ್ಲಿ ನಡೆದರೆ, ನಮಗೊದಗುವ ಫಲವೆಂದರೆ, ನಾವು ಯಾವ ದೇವರ ಕುರಿತು ಜಪ- ಅಥವಾ ಪೂಜೆಯನ್ನು ಮಾಡುತ್ತೇವೆಯೋ, ಅದರಿಂದ ಲಭ್ಯವಾಗುವ ಪುಣ್ಯವಿಶೇಷದಿಂದ, ದೇಹಾಂತ್ಯದಲ್ಲಿ ನಮಗೆ ಆ ದೇವತಾನುಗ್ರಹವಾಗಿ, ಪುನರ್ಜನ್ಮವಿರಹಿತವಾದ ಸಾಯುಜ್ಯವು ಸಿದ್ಧಿಸುವುದಾಗಿದೆ. ಆದುದರಿಂದ ಜಪ-ಪೂಜಾದಿಗಳನ್ನು ಮಾಡುವ ಮೊದಲೇ ಅಥವಾ ಮಾಡುತ್ತಿರುವಾಗ ನಾವು ಆರಾಧಿಸಲಿರುವ(ಆರಾಧಿಸುತ್ತಿರುವ) ಆ ಭವ್ಯ-ದಿವ್ಯ ಶಕ್ತಿಯ ಕುರಿತು ಸಾಧ್ಯವಾದಷ್ಟೂ ಅರಿತುಕೊಳ್ಳುವುದು ತೀರಾ ಅವಶ್ಯವಾಗಿದೆ.
ಆದಿ, ಶಕ್ತಿ, ಮಹಾ, ಮಾಯಾ ಎಂಬ ಈ ಪದಗಳಿಗೆ ಬಹಳಷ್ಟು ಅರ್ಥಗಳಿವೆ.
1. ಆದಿ – ಎಂದರೆ ಮೂಲ, ಪ್ರಾರಂಭ, ಮುಖ್ಯ, ಮೂಲಕಾರಣ, ಮೊದಲಿನ ಎಂದೂ,
2. ಶಕ್ತಿ– ಎಂದರೆ ಶೌರ್ಯ, ಸಾಮರ್ಥ್ಯ, ಕೆಚ್ಚು, ಕಸುವು, ದುರ್ಗಾದೇವಿ ಎಂದೂ,
3. ಮಹಾ- ಎಂದರೆ ಘನವಾದ, ಜ್ಞಾನವುಳ್ಳ, ಶ್ರೇಷ್ಟವಾದ, ಅಧಿಕವಾದ, ಹೆಚ್ಚಿನದಾದ, ಬಲವುಳ್ಳ ಎಂದೂ,
4. ಮಾಯಾ- ಎಂದರೆ ಮೋಹ, ಭ್ರಾಂತಿ, ಭ್ರಮೆ, ಕಣ್ಣುಕಟ್ಟು, ಇಲ್ಲದುದು, ವಿಶಿಷ್ಟ ಸೃಷ್ಟಿಶಕ್ತಿ, ಅಜ್ಞಾನ, ಸಂಪತ್ತು, ನಿಸರ್ಗ, ಪ್ರಕೃತಿ, ದೈವಿಕಲೀಲೆ, ಮಮತೆ, ಲಕ್ಷ್ಮೀದೇವಿ, ದುರ್ಗಾದೇವಿ ಎಂದೂ ನಾನಾರ್ಥಗಳಿವೆ.
ವಿಶೇಷವಾದ ಅರ್ಥವ್ಯಾಪ್ತಿಗಳಿಂದ ಕೂಡಿದ ಈ ಶಬ್ಧಗಳನ್ನು ಅನ್ವಯಿಸಿ, ವಿಶ್ಲೇಷಿಸಿದಾಗ, ನಮಗೆ ’ಆದಿಶಕ್ತಿ ಶ್ರೀಮಹಾಮಾಯಾ’ ಎಂದು ಹೆಸರಿಸಲ್ಪಡುವ ಜಗದೀಶ್ವರಿ ಶ್ರೀ ದುರ್ಗಾಂಬಿಕೆಯ ಬೃಹತ್ತು-ಮಹತ್ತುಗಳ ಅರಿವಾಗುತ್ತದೆ. ಸೃಷ್ಟಿಯ (ಲೋಕದ) ಸೃಷ್ಟಿ (ಉತ್ಪತ್ತಿ) ಗಿಂತಲೂ ಮೊದಲಿನವಳೂ, ಸೃಷ್ಟಿಯ ಹಾಗೂ ವಿಶ್ವದ ಸಕಲ ಜೀವಿಗಳ ಆವಿರ್ಭಾವಕ್ಕೆ(ಹುಟ್ಟಿಗೆ) ಮೂಲಕಾರಣಳಾದವಳೂ ಗುರುತರವೂ, ವಿಶಾಲವೂ ಆದ ಶಕ್ತಿ-ಸಾಮರ್ಥ್ಯಗಳನ್ನು ಹೊಂದಿದವಳೂ, ಶ್ರೇಷ್ಟಳೂ, ಹೆಚ್ಚಾದ ಮೇಲ್ಮೆಯನ್ನು ಹೊಂದಿದವಳೂ, ಮೋಹ-ಭ್ರಮಾ-ಭ್ರಾಂತಿ-ಅಜ್ಞಾನಗಳಲ್ಲಿ ಹಾಸುಹೊಕ್ಕಾಗಿರುವವಳೂ, ಚರ್ಮಚಕ್ಷುಗಳಿಗೆ ಅಗೋಚರಳೂ, ವಿಶಿಷ್ಟ ಸೃಷ್ಟಿಶಕ್ತಿ-ಧಾರಣಾಶಕ್ತಿಗಳಿಂದ ಕೂಡಿದವಳೂ, ನಿಸರ್ಗಸ್ವರೂಪಿಣಿಯೂ, ಮೂಲಪ್ರಕೃತಿಯೂ, ಜಗದಾಧಾರೆಯೂ ಜ್ಞಾನಭರಿತೆಯೆಂಬುದರಿಂದ ವಾಗೀಶ್ವರಿ-ಶಾರದೆಯಾಗಿರುವವಳೂ, ಸಂಪದ್ಭರಿತೆಯೆಂಬುದರಿಂದ ಶ್ರೀಲಕ್ಷ್ಮೀದೇವಿಯಾಗಿರುವವಳೂ, ಅಜ್ಞಾನ(ತಾಮಸ) ಆವೃತೆಯೆಂಬುದರಿಂದ ಕಾಲಿಕಾಸ್ವರೂಪದಿಂದ ಒಪ್ಪಿರುವವಳೂ, ಮಮತಾಮಯಿಯೆಂಬುದರಿಂದ ಜಗನ್ಮಾತೆಯಾಗಿ ಸಮಸ್ತ ಜೀವಕೋಟಿಗಳ ಉತ್ಪತ್ತಿ-ಪಾಲನೆಗಳನ್ನು ಮಾಡುತ್ತಿರುವವಳೂ – ಎಂಬಿತ್ಯಾದಿ ವಿಚಾರಗಳು ನಮಗೆ ವೇದ್ಯವಾಗುತ್ತವೆ.
ಶ್ರೀದೇವಿಯ ಚರಿತ್ರೆಯಲ್ಲಿ ಬರುವಂತೆ ದುಷ್ಟರಾಕ್ಷಸ ದಮನಕ್ಕಾಗಿ ಸುಂದರ ಯುವತಿಯಾಗಿ ನದಿ ದಂಡೆಯಲ್ಲಿ ಕುಳಿತಿರಲು ರಾಕ್ಷಸನ ಭಂಟರು, ನದಿಯ ದಂಡೆಯ ಮೇಲೆ ಕುಳಿತ ಈ ಸುಂದರಿಯನ್ನು ವರಿಸಲು ರಾಜರಾದ ಶುಂಭ , ನಿಶುಂಭರಿಗೆ ತಿಳಿಸಿದಾಗ ಕೂಡಲೇ ದೇವಿಯತ್ತರ ರಾಕ್ಷಸರು ಬಂದಾಗ ದೇವಿಯನ್ನು ವರಿಸಿಕೊಳ್ಳಲು ತವಕಿಸುತ್ತಿದ್ದಾಗ ಶ್ರೀದೇವಿಯು ದುಷ್ಟರ ದಮನಕ್ಕಾಗಿ ಒಂದು ನಾಟಕವನ್ನಾಡಿ ಅದು ನನ್ನೊಡನೇ ಯುದ್ಧ ಮಾಡಿ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಅವರನ್ನು ನಾನು ಮದುವೆಯಾಗುತ್ತೇನೆ ಎಂದಾಗ ಅದರಂತೆ ದುಷ್ಟ ರಾಕ್ಷಸರಿರ್ವರು ಘೋರ ಯುದ್ಧವಾಡಲು ಸನ್ನದ್ಧರಾದಾಗ ದೇವಿಯು ರೌದ್ರಾವತಾರ ತಾಳಿ ದುಷ್ಟರನ್ನು ದಮನಿಸಿದ್ಧ ಕಥೆಯನ್ನಾಧರಿಸಿದೆ.
ಒಂಭತ್ತು ರಾತ್ರಿಗಳಲ್ಲಿ ಒಂಭತ್ತು ರಾಕ್ಷಸರನ್ನು ಸಂಹರಿಸಿದ ಪ್ರಯುಕ್ತ ನವರಾತ್ರಿಯಾಯಿತು ಎಂದು ನಂಬಿರುವ ಭಾರತೀಯ ಸಂಸ್ಕ್ಕತಿಗೆ ದೇವಿಯ ಮಹಿಮೆ ಅಪಾರವಾದದ್ದು ಇದನ್ನು ಅರಿಯಲೆಂದು ಒಂಭತ್ತು ದಿನ ನವರಾತ್ರಿ ಉತ್ಸವ.
ಚಂಡಮುಂಡರೆಂಬ ರಾಕ್ಷಸರನ್ನು ಕೊಂದು ಚಾಮುಂಡಿ ಎಂದು ಶುಂಭ ನಿಶುಂಭರನ್ನು ಕೊಂದು ಶಾಂಭವಿ ಎಂದು ಮಹಿಷಾಸುರನನ್ನು ಕೊಂದು ಮಹಿಷಾಸುರ ಮರ್ದಿನಿಯಾಗಿ ಇದರಂತೆ ಧೂಮ್ರಲೋಚನ, ರಕ್ತಬೀಜಾಸುರ, ಮಧುಕೈಟಭ ಎಂಬ ರಾಕ್ಷಸರನ್ನು ಕೊಂದು ನವದುರ್ಗೆ ಎಂಬ ನಾಮಾಂಕಿತಳಾಗಿದ್ದಾಳೆ.
ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತದಾದ್ಯಂತ 9 ದಿನ ಆಚರಿಸುವ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯೇ ಪ್ರಧಾನ.
ಒಂಭತ್ತು ದಿನೋತ್ಸವ
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ
ತತೀಯಂ ಚಂದ್ರಘಂಟೀತಿ ಕೂಷ್ಮಾಂಡೇತಿ ಚತುರ್ಥಕಮ್
ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್
ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ
ಎಂದು ದೇವಿ ಕವಚದಲ್ಲಿ ಉಲ್ಲೇಖಿಸಲಾಗಿದೆ.
1.ದುರ್ಗಾದೇವಿಯ ಪ್ರಥಮ ಸ್ವರೂಪವನ್ನು ಶೈಲಪುತ್ರಿ – ಎಂದು ನವರಾತ್ರಿಯ ಮೊದಲನೇ ದಿನ ಆರಾಧಿಸುತ್ತಾರೆ. ಪರ್ವತ ರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಈಕೆ ಶೈಲಪುತ್ರಿ.
ವೃಷಭವಾಹನೆ, ಬಲ ಹಸ್ತದಲ್ಲಿ ತ್ರಿಶೂಲ, ಎಡಹಸ್ತದಲ್ಲಿ ಕಮಲ ಪುಷ್ಪದಿಂದ ಸುಶೋಭಿತಳಾಗಿರುವ ಶೈಲಪುತ್ರಿ ದುರ್ಗೆಯನ್ನು ಮೂಲಾಧಾರ ಚಕ್ರದಲ್ಲಿ ಆರಾಧಕರು ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಯೋಗಸಾಧನೆಯ ಪ್ರಾರಂಭ.
2.ನವರಾತ್ರಿಯ ದ್ವಿತೀಯ ದಿನವನ್ನು ನವಶಕ್ತಿಯರಲ್ಲಿ ಎರಡನೇ ಸ್ವರೂಪವಾದ ಬ್ರಹ್ಮಚಾರಿಣಿ – ದುರ್ಗಾ ಮಾತೆಯ ಆರಾಧನೆಯೊಂದಿಗೆ ನೆರವೇರಿಸಲಾಗುವುದು. ಇವಳ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತದೆ.
ಈಕೆಯ ಸ್ವರೂಪ ಜ್ಯೋತಿರ್ಮಯ ಮತ್ತು ಅತ್ಯಂತ ಭವ್ಯವಾಗಿದ್ದು ಬಲ ಹಸ್ತದಲ್ಲಿ ಜಪಮಾಲೆ ಹಾಗೂ ಎಡಹಸ್ತದಲ್ಲಿ ಕಮಂಡಲ ಇರುತ್ತದೆ.
3.ಮೂರನೇ ದಿನ ಚಂದ್ರಘಂಟಾ – ದೇವಿಯ ಆರಾಧನೆ. ಇವಳ ಸ್ವರೂಪ ಪರಮ ಶಾಂತಿದಾಯಕ ಹಾಗೂ ಶ್ರೇಯಸ್ಕರ. ದಶಹಸ್ತಗಳುಳ್ಳ ದೇವಿಯು ಶಸ್ತ್ರ ಸಜ್ಜಿತಳಾಗಿ, ಯುದ್ಧ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ.
ದೇವಿಯ ಮಸ್ತಕದಲ್ಲಿ ಗಂಟೆಯ ಆಕಾರದ ಚಂದ್ರನಿದ್ದಾನೆ. ಆದ್ದರಿಂದಲೇ ಈಕೆ `ಚಂದ್ರಘಂಟಾ.
4. ದುರ್ಗಾ ಮಾತೆಯ ನಾಲ್ಕನೇ ಸ್ವರೂಪವೇ ಕೂಷ್ಮಾಂಡಾ– ಅಷ್ಟ ಭುಜಗಳುಳ್ಳವಳಾದ್ದರಿಂದ ಅಷ್ಟಭುಜಾದೇವಿ ಎಂದೂ ಆರಾಧಿಸುತ್ತಾರೆ.
ಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ತನ್ನ ಎಂಟು ಹಸ್ತಗಳಲ್ಲಿ ಧರಿಸಿದ್ದಾಳೆ. ಕೂಷ್ಮಾಂಡಾದೇವಿಗೆ ಬೂದುಕುಂಬಳಕಾಯಿ ಬಲಿಯೇ ಅತ್ಯಂತ ಪ್ರಿಯ. ಕುಂಬಳಕಾಯಿಯನ್ನು ಸಂಸ್ಕೃತದಲ್ಲಿ ಕೂಷ್ಮಾಂಡ ಎಂದು ಕರೆಯುತ್ತಾರೆ.
5. ಐದನೇ ದಿನ ನವದುರ್ಗೆಯರ ಆರಾಧನೆಯನ್ನು ಸ್ಕಂದ ಮಾತಾ– ಸ್ವರೂಪದಲ್ಲಿ ಮಾಡಲಾಗುತ್ತದೆ. ಷಣ್ಮುಖ ಸ್ಕಂದನ ಮಾತೆಯಾದ್ದರಿಂದ ಸ್ಕಂದಮಾತಾ ಹೆಸರು ಬಂದಿದೆ. ನಾಲ್ಕು ಭುಜ-ನಾಲ್ಕು ಹಸ್ತಯುಕ್ತ ಮಾತೆಯು ಸಿಂಹವಾಹನೆ .
ಸ್ಕಂದಮಾತೆಯ ಉಪಾಸನೆಯಿಂದ ಬಾಲರೂಪೀ ಸುಬ್ರಹ್ಮಣ್ಯ ಸ್ವಾಮಿಯ ಉಪಾಸನೆ ಕೂಡ ತಾನಾಗಿಯೇ ಆಗುತ್ತದೆ.
6. ದುರ್ಗಾಮಾತೆಯ ಆರನೇ ಸ್ವರೂಪದ ಹೆಸರೇ ಕಾತ್ಯಾಯಿನಿ- ನಾಲ್ಕು ಭುಜಗಳುಳ್ಳ ಸಿಂಹವಾಹನೆಯು ಬಂಗಾರದ ವರ್ಣದಿಂದ ಹೊಳೆಯುತ್ತಿರುತ್ತಾಳೆ.
7. ಏಳನೇ ದಿನ ಆರಾಧಿಸುವ ದುರ್ಗೆಯ ಏಳನೇ ಶಕ್ತಿಯೇ `ಕಾಲರಾತ್ರಿ – ಅತ್ಯಂತ ಭಯಂಕರವಾದ ಸ್ವರೂಪವುಳ್ಳವಳಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭ ಫಲವನ್ನೇ ಕರುಣಿಸುತ್ತಾಳೆ. ಆದ್ದರಿಂದಲೇ ಇವಳನ್ನು ಶುಭಂಕರೀ ಎಂದು ಪೂಜಿಸುತ್ತಾರೆ.
ದಟ್ಟವಾದ ಅಂಧಕಾರದಂತೆ ಇವಳ ಶರೀರದ ವರ್ಣವು ಕಪ್ಪು. ತಲೆಗೂದಲು ಬಿಚ್ಚಿ ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆಯನ್ನು ಧರಿಸಿದ್ದಾಳೆ.
ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲವಾಗಿದ್ದು, ವಿದ್ಯುತ್ತಿನಂತೆ ಕಿರಣಗಳನ್ನು ಹೊಮ್ಮಿಸುತ್ತಿವೆ. ಕಾಲರಾತ್ರೀ ಮಾತೆಯ ವಾಹನ ಕತ್ತೆ.
8. ಜಗದಂಬೆಯ ಎಂಟನೆ ಶಕ್ತಿಯೇ `ಮಹಾಗೌರಿ – ವಷಭ ವಾಹನೆ, ಚತುರ್ಭುಜೆ, ಶ್ವೇತವರ್ಣೆ. ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ, ಕೆಳಗಿನ ಬಲಗೈಯಲ್ಲಿ ತ್ರಿಶೂಲ ಮತ್ತು ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದಮುದ್ರೆ ಇದೆ.
ನವರಾತ್ರಿಯ ಎಂಟನೇ ದಿನ (ದುರ್ಗಾಷ್ಟಮೀ) ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆಯಿದೆ. ಇವಳ ಆರಾಧನೆ-ಕಪೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿದೆ.
9. 9ನೇ ದಿನವೇ ಮಹಾನವಮಿ. ಅಂದು ದುರ್ಗೆಯನ್ನು `ಸಿದ್ಧಿದಾತ್ರಿ- ರೂಪದಲ್ಲಿ ಪೂಜಿಸಲಾಗುತ್ತದೆ. ಸಾಧಕರಿಗೆ ಎಲ್ಲ ರೀತಿಯ ಸಿದ್ಧಿಗಳನ್ನೂ ಕರುಣಿಸುವವಳಾದ್ದರಿಂದ ಆಕೆ `ಸಿದ್ಧಿದಾತ್ರಿ.
ಮಾರ್ಕಂಡೇಯ ಪುರಾಣದಲ್ಲಿ ಉಲ್ಲೆೀಖಿತವಾಗಿರುವ ಅಷ್ಟ ಸಿದ್ಧಿಗಳಾದ `ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಹಾಗೂ ವಶಿತ್ವ~ ಮುಂತಾದ ಎಲ್ಲ ಸಿದ್ಧಿಗಳನ್ನೂ ದಯಪಾಲಿಸುವ ಮಹಾಮಹಿಮೆಯಾಗಿದ್ದಾಳೆ.
ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ. ಕಮಲ ಪುಷ್ಪದ ಮೇಲೆ ವಿರಾಜಮಾನಳಾಗಿದ್ದಾಳೆ. ಚಕ್ರ, ಶಂಖ, ಗದೆ ಹಾಗೂ ಕಮಲ ಪುಷ್ಪವನ್ನು ಕೈಗಳಲ್ಲಿ ಧರಿಸಿದ್ದಾಳೆ.
ಹೀಗೆ, ನವರಾತ್ರಿಗೆ ನವದುರ್ಗೆಯರ ಆರಾಧನೆಯನ್ನು ಪರಂಪರಾನುಗತವಾಗಿ ಮಾಡಿಕೊಂಡು ಬರಲಾಗುತ್ತಿದೆ.
ನವದುರ್ಗೆಯರ ಏಕೀಕೃತ ಮೂರ್ತಿ ಅಷ್ಟಾದಶಭುಜ ಅಂದರೆ, ಹದಿನೆಂಟು ಭುಜ-ಹಸ್ತಗಳನ್ನುಳ್ಳ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಸ್ವರೂಪಿಣಿಯೇ ಮಹಾತ್ರಿಪುರ ಸುಂದರಿ.
ತ್ರೇತಾಯುಗದಲ್ಲಿ ಶ್ರೀರಾಮನು ನವರಾತ್ರಿಯ ಕಾಲಾವಧಿಯಲ್ಲಿ ದೇವಿಯ ಉಪಾಸನೆಯನ್ನು ಮಾಡಿ,ದೇವಿ ಕೃಪಾಶೀರ್ವಾದದಿಂದಲೇ ವಿಜಯದಶಮಿಯಂದು ರಾವಣನನ್ನು ವಧಿಸಿದನು.
ದ್ವಾಪರಯುಗದಲ್ಲಿಯೂ ಶ್ರೀಕೃಷ್ಣನ ಪ್ರೇರಣೆಯಿಂದ ಅರ್ಜುನನು ಮಹಾಭಾರತದ ಯುದ್ಧವನ್ನು ಪ್ರಾರಂಭಿಸುವ ಮೊದಲು ಶ್ರೀ ದುರ್ಗಾದೇವಿಗೆ ಶರಣಾಗಿ ಪ್ರಾರ್ಥಿಸಿದಾಗ, ಶ್ರೀ ದುರ್ಗಾದೇವಿಯು ಪ್ರಸನ್ನಳಾಗಿ ಅರ್ಜುನನಿಗೆ ಜಯಶಾಲಿಯಾಗುವಂತೆ ಆಶೀರ್ವದಿಸಿದಳು. ಶ್ರೀ ದುರ್ಗಾ ದೇವಿಯ ಕೃಪೆಯ ಕವಚವನ್ನು ಧರಿಸಿಯೇ ಅರ್ಜುನನು ಮಹಾಭಾರತದ ಯುದ್ಧವನ್ನು ಮಾಡಿ ಜಯಶಾಲಿಯಾದನು.
ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ-ಅನುಗ್ರಹಗಳು ಪ್ರಾಪ್ತಿಗಾಗಿ ಪ್ರಾರ್ಥಿಸೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ