Latest

ರಾಜ್ಯದಲ್ಲಿ ಅವಧಿ ಪೂರ್ವ ವಿಧಾನಸಭೆ ಚುನಾವಣೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 2023ರಲ್ಲಿ ಕರ್ನಾಟಕದಲ್ಲಿ ನಡೆಯಬೇಕಿರುವ ವಿಧಾನಸಭೆ ಚುನಾವಣೆ ಅವಧಿ ಪೂರ್ವದಲ್ಲೇ ನಡೆಯುತ್ತಾ?

ಎಲ್ಲ ರಾಜಕೀಯ ಪಕ್ಷಗಳ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂತಹ ಅನುಮಾನಕ್ಕೆ ಅವಕಾಶವಿದೆ.  ಅದಕ್ಕೆ ಕಾರಣವೂ ಇದೆ.

Related Articles

ಈಗಿನ ವಿಧಾನಸಭೆಯ ಅವಧಿ ಮೇ 24, 2023ರ ತನಕ ಇದೆ. ಆದರೆ ಅಲ್ಲಿಯವರೆಗೂ ಕಾಯಲು ಯಾವ ರಾಜಕೀಯ ಪಕ್ಷಗಳೂ ಸಿದ್ಧವಿದ್ದಂತಿಲ್ಲ. ಮೂರೂ ಪಕ್ಷಗಳು ಚುನಾವಣೆ ಮೂಡ್ ಗೆ ಹೊರಳಿ ಹೆಚ್ಚು ಕಡಿಮೆ 6 ತಿಂಗಳಾಗಿದೆ. ಚುನಾವಣೆ ಸಮಿತಿಗಳ ರಚನೆ, ಸಭೆಯ ಮೇಲೆ ಸಭೆ, ಕಾರ್ಯಾಗಾರ ಇವೆಲ್ಲ ಚುನಾವಣೆ ಸಿದ್ಧತೆಯ ಮುನ್ಸೂಚನೆಗಳಾಗಿವೆ.

ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಾಗಲೇ ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆಯ ದಟ್ಟ ವದಂತಿ ಹಬ್ಬಿತ್ತು. ಪಂಚ ರಾಜ್ಯಗಳ ಫಲಿತಾಂಶ ಬಿಜೆಪಿಗೆ ಮೇಲುಗೈ ತಂದರೆ ಅದೇ ಹವಾದಲ್ಲಿ ಕರ್ನಾಟಕದಲ್ಲೂ ಗೆಲ್ಲಬಹುದು ಎಂದು ಬಿಜೆಪಿ ಲೆಕ್ಕ ಹಾಕುತ್ತಿದೆ ಎನ್ನುವ ಸುದ್ದಿ ಹರಡಿತ್ತು.

ಈಚೆಗೆ ಬಿಜೆಪಿ ಕರ್ನಾಟಕದಲ್ಲಿ ನಡೆೆಸಿರುವ ಆಂತರಿಕ ಸಮೀಕ್ಷೆ ಕೂಡ ಪಕ್ಷವನ್ನು ಗಡಿಬಿಡಿಗೆ ನೂಕಿದೆ. ಯಾವುದಾದರೊಂದು ಬಲವಾದ ಇಶ್ಯೂ ಇಟ್ಟುಕೊಂಡು ಚುನಾವಣೆ ಎದುರಿಸಲೇಬೇಕಾದ ಅನಿವಾರ್ಯತೆಗೆ ತಳ್ಳಿದೆ. ಹಾಗಾಗಿಯೇ ಹಿಂದುತ್ವದ ಅಜೆಂಡಾವನ್ನು ಗಟ್ಟಿಗೊಳಿಸುತ್ತಿದೆ.

ಕಾಂಗ್ರೆಸ್ ಈಗಾಗಲೆ ಪಾದಯಾತ್ರೆ, ಕಾರ್ಯಾಗಾರಗಳನ್ನು ನಡೆಸುತ್ತಿದೆ. ಆಗಸ್ಟ್ 3ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನದ ನೆಪದಲ್ಲಿ ಚುನಾವಣೆ ಸಮರಕ್ಕೆ ಕರೆ ನೀಡುವ ಸಾಧ್ಯತೆ ಇದೆ. ಜೆಡಿಎಸ್ ಜನಮಿತ್ರ ಸಮಾವೇಶ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದು,  ಡಿಸೆಂಬರ್ ನಲ್ಲಿ ಚುನಾವಣೆ ಸಿದ್ದರಾಗಿ ಎಂದು ಎಚ್.ಡಿ. ಕುಮಾರಸ್ವಾಮಿ ಈಗಾಗಲೆ ಕರೆ ನೀಡಿದ್ದಾರೆ.

ಬಿಜೆಪಿ ಈಗಾಗಲೆ ತನ್ನ ಎಲ್ಲ ಸಚಿವರಿಗೆ ಕಣಕ್ಕಿಳಿಯುವಂತೆ ಆದೇಶ ನೀಡಿದೆ. ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ಸಕ್ರೀಯವಾಗುವಂತೆ ಕಟ್ಟಪ್ಪಣೆ ನೀಡಿದೆ.

‘ಟ್ವೀಟ್ ಸಮರ

ರಾಜ್ಯದಲ್ಲಿ ಕಾಂಗ್ರೆಸ್ – ಬಿಜೆಪಿ ಸಮರ ಕಳೆದ 5 -6 ತಿಂಗಳಿನಿಂದಲೇ ಮಿತಿ ಮೀರಿದೆ. ಟ್ವೀಟರ್ ನಲ್ಲಂತೂ ಅತ್ಯಂತ ಕೀಳಮಟ್ಟದ ಆರೋಪ -ಪ್ರತ್ಯಾರೋಪಗಳಲ್ಲಿ ಎರಡೂ ಪಕ್ಷಗಳು ತೊಡಗಿವೆ. ಬಿಜೆಪಿ ಸರಕಾರದ ಹಗರಣಗಳನ್ನು, ಬಿಎಸ್ವೈ ಮೂಲೆಗುಂಪು ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಟ್ವೀಟ್ ಮಾಡುತ್ತಿದ್ದರೆ, ಕಾಂಗ್ರೆಸ್ ಇತಿಹಾಸ, ಗಾಂಧಿ ಕುಟುಂಬದ ಹಗರಣ, ಸಿದ್ದರಾಮಯ್ಯ- ಡಿಕೆಶಿ ಆಂತರಿಕ ಕಲಹಗಳೇ ಬಿಜೆಪಿಯ ಪ್ರಮುಖ ಅಸ್ತ್ರವಾಗಿದೆ.

ಬಿಜೆಪಿ ಸರಕಾರ ಪಿಎಸ್ಐ ಹಗರಣ, ಬಿಟ್ ಕಾಯಿನ್ ಹಗರಣ, ಪಠ್ಯ ಪುಸ್ತಕ ವಿವಾದ, 40 % ಕಮಿಶನ್ ವಿವಾದ, ಮೀಸಲಾತಿ ವಿವಾದ ಮೊದಲಾದವುಗಳಿಂದ ತತ್ತರಿಸಿ ಹೋಗಿದ್ದರೆ, ಕಾಂಗ್ರೆಸ್ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಬಣಗಳ ಆಂತರಿಕ ಕಚ್ಚಾಟದಿಂದಲೇ ಕಂಗಾಲಾಗಿದೆ. ಜೆಡಿಎಸ್ ಕಳೆದುಕೊಂಡಿರುವ ನೆಲೆ ಹುಡುಕುವುದರಲ್ಲೇ ಮಗ್ನವಾಗಿದೆ.

ಬಿಜೆಪಿ ಇದೀಗ ಪ್ರವಾಹ ಕಾರ್ಯಾಚರಣೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಹಾಗೂ ಸಚಿವರ ಫೋಟೋ, ಹೇಳಿಕೆಗಳನ್ನಿಟ್ಟುಕೊಂಡು ಟ್ವೀಟ್ ಸರಣಿ ಮುನ್ನಡೆಸಿದೆ. ಎಲ್ಲ ಸಚಿವರೂ ಕ್ಷೇತ್ರಕ್ಕಿಳಿಯುವಂತೆ ಸೂಚಿಸಿದ್ದು, ಅವರ ಪ್ರವಾಸ ಪಟ್ಟಿಯನ್ನು, ಅಲ್ಲಿನ ಫೋಟೋಗಳನ್ನು ನಿರಂತರವಾಗಿ ಟ್ವೀಟ್ ಮಾಡುತ್ತಿದೆ. ಇವೆಲ್ಲವನ್ನೂ ಗಮನಿಸಿದರೆ ಚುನಾವಣೆ ಘೋಷಣೆಯಾಗಿದೆಯೇನೋ ಎನ್ನುವ ರೀತಿಯಲ್ಲಿ ಸಚಿವರುಗಳು ಕೆಲಸ ಆರಂಭಿಸಿದ್ದಾರೆ.

ಕಾಂಗ್ರೆಸ್ ಸರಕಾರದ ಹಳೆಯ ಹಗರಣಗಳನ್ನು ಕೆದಕುವ ಕಾರ್ಯವನ್ನೂ ಬಿಜೆಪಿ ಆರಂಭಿಸಿದೆ. ಒಂದೋಂದೇ ಹಗರಣಗಳನ್ನು ಎತ್ತಿ ಟ್ವೀಟ್ ಮಾಡುತ್ತಿದೆ. ಎರಡೂ ಪಕ್ಷಗಳು ತಮ್ಮ ತಮ್ಮ ಸಾಧನೆಗಳಿಗಿಂತ ಇನ್ನೊಬ್ಬರ ಕಾಲೆಳೆಯುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿವೆ.

ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎನ್ನುವ ಮಾತನ್ನು ಎಲ್ಲ ಪಕ್ಷಗಳೂ ಆಂತರಿಕವಾಗಿ ಹೇಳುತ್ತಿವೆ. ಬಿಜೆಪಿ ತನ್ನ ಪಕ್ಷದ ಸಾಧನೆಗಳ ಪಟ್ಟಿಯನ್ನು ಜನತೆಯ ಮುಂದಿಡುವ ಕೆಲಸವನ್ನು ಸಮರೋಪಾದಿಯಲ್ಲಿ ಆರಂಭಿಸಿದ್ದರೆ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಬಿಜೆಪಿಯ ಹಗರಣಗಳನ್ನು ಬಿಚ್ಚಿಡುತ್ತಿದೆ.

ಕಾಂಗ್ರೆಸ್ ಸರಕಾರವಿದ್ದಾಗಿನ ಹಗರಣಗಳನ್ನು ಬಿಜೆಪಿ ಒಂದೊಂದೇ ಹೊರಹಾಕುತ್ತಿದ್ದರೆ, ನೀವು ಆಗೇನು ಮಾಡ್ತ್ತಿದ್ರಿ ಎಂದು ಕಾಂಗ್ರೆಸ್ ತಿರುಗೇಟು ನೀಡುತ್ತಿದೆ.

ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ಮಧ್ಯ ಉಂಟಾಗಿರುವ ಕಂದಕವನ್ನು ಇನ್ನಷ್ಟು ಜೋರಾಗಿ ಎಬ್ಬಿಸಲು ಬಿಜೆಪಿ ಮುಂದಾಗಿದ್ದರೆ, ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವ ಅಂಶವನ್ನು ಕಾಂಗ್ರೆಸ್ ಹೊರಹಾಕುತ್ತಿದೆ. ಇವೆಲ್ಲ ಚುನಾವಣೆ ಹತ್ತಿರುವ ಬರುತ್ತಿರುವುದರ ಸೂಚನೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಈಚೆಗೆ ಆಂತರಿಕ ಸಮೀಕ್ಷೆ ನಡೆಸಿದ್ದು ಇದರಲ್ಲಿ ರಾಜ್ಯದಲ್ಲಿ ಈಬಾರಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎನ್ನುವ ಅಂಶ ಕಂಡುಬಂದಿದೆ. ಹಾಗಾಗಿ ಹೇಗಾದರೂ ಮಾಡಿ ಅದನ್ನು ಸರಿಪಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದೆೆ. ಒಂದಾದ ಮೇಲೆ ಒಂದು ಹಗರಣಗಳು ಬಯಲಿಗೆ ಬರುತ್ತಿರುವುದರಿಂದ ಬಿಜೆಪಿ ಕಾರ್ಯಕರ್ತರು ತತ್ತರಿಸಿ ಹೋಗಿದ್ದಾರೆ.

ಹಾಗಾಗಿ ಹಿಂದುತ್ವದ ಅಲೆಯನ್ನೇ ಗಟ್ಟಿಗೊಳಿಸಿ ಈ ಬಾರಿ ಚುನಾವಣೆ ಎದುರಿಸಬೇಕು ಎನ್ನುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಹಿಂದೆಂದಿಗಿಂತ ಜೋರಾಗಿ ಹಿಂದುತ್ವವನ್ನು ಮುಂದೆ ಮಾಡಲು ನಿರ್ಧರಿಸಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜಾತ್ಯತೀತ ಎನ್ನುತ್ತ ಅಗತ್ಯಕ್ಕಿಂತ ಹೆಚ್ಚಾಗಿಯೇ ಮುಸ್ಲಿಂ ಓಲೈಕೆ ಮಾಡುತ್ತಿವೆ.

ಈ ಬಾರಿ ಎಲ್ಲ ಪಕ್ಷಗಳೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದು, ಅಭ್ಯರ್ಥಿ  ಆಯ್ಕೆ ಪ್ರಕ್ರಿಯೆಯನ್ನೂ ಆಂತರಿಕವಾಗಿ ಶುರುವಿಟ್ಟುಕೊಂಡಿವೆ. ಇದೂ ಕೂಡ ಚುನಾವಣೆ ಹತ್ತಿರ ಬರುತ್ತಿರುವುದರ ಲಕ್ಷಣವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಚುನಾವಣೆ ಗಡಿಬಿಡಿ ಈಗಾಗಲೆ ಶುರುವಾಗಿದ್ದು,  ಈಗಿನ ಟ್ವೀಟರ್ ವಾರ್ ಮುಂದಿನ ದಿನಗಳಲ್ಲಿ ಬೀದಿ ಕಾಳಗವಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಜೊತೆಗೆ ಪಕ್ಷಾಂತರ ಪರ್ವವೂ ಈ ಬಾರಿ ಹಿಂದೆಂದಿಗಿಂತ ಹೆಚ್ಚಾಗಿ ನಡೆಯುವ ಲಕ್ಷಣವೂ ಘೋಚರವಾಗುತ್ತಿದೆ.

ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಬಂದಿರುವ ಕೆಲವರು ವಾಪಸ್ ಹೋಗುವ ಸಾಧ್ಯತೆ ಇದ್ದು, ಕಾಂಗ್ರೆಸ್, ಜೆಡಿಎಸ್ ನಲ್ಲಿ ಟಿಕೆಟ್ ವಂಚಿತರು ಬಿಜೆಪಿಯತ್ತ ಮುಖ ಮಾಡಿದರೆ ಆಶ್ಚರ್ಯವಿಲ್ಲ.

 

 *ಕಡಲ ಕೊರೆತಕ್ಕೆ ದೀರ್ಘಕಾಲಿಕ  ಯೋಜನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಕಣ್ಣುಗಳನ್ನೇ ಯಾಮಾರಿಸುತ್ತೆ ಈ ತಲೆಕೆಳಗಾದ ಜಲಪಾತ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button