Belagavi NewsBelgaum NewsKannada NewsKarnataka NewsNationalPolitics

*ಸಚಿವ ಸತೀಶ್‌ ಜಾರಕಿಹೊಳಿ ಆಪ್ತ ಸಂಬಂಧಿಗೆ ಇಡಿ ಶಾಕ್: ಬೆಳಗಾವಿ ಸೇರಿ ಹಲವು ಕಡೆ ಪರಿಶೀಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಪುತ್ರ, ಸಚಿವ ಸತೀಶ್‌ ಜಾರಕಿಹೊಳಿ ಅವರ ಸ್ವಂತ ಸಹೋದರಿಯ ಪತಿಯೇ ಆಗಿರುವ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ ಮಂಜುನಾಥ್ ಅವರ ನಿವಾಸ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಮಂಜುನಾಥ್ ಅವರ ಬೆಳಗಾವಿಯ ಹನುಮಾನ್ ನಗರದಲ್ಲಿರುವ ಐಷಾರಾಮಿ ನಿವಾಸದ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

Home add -Advt

ಮಂಜುನಾಥ್ ಅವರ ಬೆಳಗಾವಿ ನಿವಾಸದ ಜೊತೆಗೆ ಅವರಿಗೆ ಸಂಬಂಧಿಸಿದ ಇನ್ನುಳಿದ ಐದು ಕಚೇರಿ ಹಾಗೂ ನಿವಾಸಗಳ ಮೇಲೂ ದಾಳಿಯಾಗಿದ್ದು ಕಾಗದ ಪತ್ರಗಳು, ಬ್ಯಾಂಕ್ ಖಾತೆಗಳು ಹಾಗೂ ಆಸ್ತಿ ಪಾಸ್ತಿ ವಿವರಗಳನ್ನು ಕಲೆಹಾಕಲಾಗುತ್ತಿದೆ.

ಇನ್ನು ಬೆಳಗಾವಿ, ಮೈಸೂರು, ಬೆಂಗಳೂರು ಹಾಗೂ ಅರಸಿಕೇರೆ ಸೇರಿ ಒಟ್ಟು ಆರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದ್ದು ವೈ ಮಂಜುನಾಥಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಮೈಸೂರಿನಲ್ಲಿರುವ ಸ್ನೇಹಿತರ ಮನೆ, ಬೆಂಗಳೂರಿನ ಅಪಾರ್ಟೆಂಟ್, ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿರುವ ಆಪ್ತನ ಮನೆ ಹಾಗೂ ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಸ್ನೇಹಿತನ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವೈ ಮಂಜುನಾಥ ವಿರುದ್ಧ ಬೇನಾಮಿ ಹೆಸರಲ್ಲಿ ಜಮೀನು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೂಲಕ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದಿದೆ. ಸದ್ಯ ಬೆಂಗಳೂರಿನ ಅಪಾರ್ಟೆಂಟ್‌ನಲ್ಲಿ ಇರುವ ವೈ ಮಂಜುನಾಥ ನಿವಾಸದಲ್ಲೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ಸ್ಥಳೀಯ ಪೊಲೀಸರ ನೆರವು ಪಡೆಯುವ ಬದಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ 10ಕ್ಕೂ ಹೆಚ್ಚು ಸಶಸ್ತ್ರ ಅರೆಸೇನಾ ಪಡೆ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ಈ ಪರಿಶೀಲನೆ ನಡೆಸುತ್ತಿದ್ದಾರೆ. 

ದಾಳಿ ನಡೆದ ಸಂದರ್ಭದಲ್ಲಿ ಮನೆಯ ಪ್ರಮುಖ ಗೇಟ್‌ಗಳನ್ನು ಬಂದ್‌ ಮಾಡಿ, ಕುಟುಂಬಸ್ಥರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಮಹತ್ವದ ದಾಖಲೆಗಳಿಗಾಗಿ ಜಾಲಾಡುತ್ತಿದ್ದಾರೆ.

Related Articles

Back to top button