
ಪ್ರಗತಿವಾಹಿನಿ ಸುದ್ದಿ :ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆಸಿ ವಿರೇಂದ್ರ ಪಪ್ಪಿ ವಿರುದ್ಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಮತ್ತೆ ದಾಳಿ ನಡೆಸಿ, ಎರಡು ಲಾಕರ್ ಗಳನ್ನು ಜಪ್ತಿ ಮಾಡಿದ್ದಾರೆ. ಇದೀಗ ಲಾಕರ್ ತೆರೆದ ಇಡಿ ಅಧಿಕಾರಿಗಳು 50.33 ಕೋಟಿ ರೂ. ಮೌಲ್ಯದ 40 ಕೆ.ಜಿ. ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ.
ಆನ್ಲೈನ್ ಬೆಟ್ಟಿಂಗ್ ದಂಧೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ನಾಯಕ ವೀರೇಂದ್ರ ಪಪ್ಪಿಗೆ ಇಡಿ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ಅಧಿಕಾರಿಗಳು ಚಳ್ಳಕೆರೆಯ ಫೆಡರಲ್ ಬ್ಯಾಂಕ್ ಸೇರಿದಂತೆ ಪಟ್ಟಣದ ಹಲವೆಡೆ ಶೋಧ ನಡೆಸಿದ್ದಾರೆ. ಅವರು ಆನ್ಲೈನ್ ಬೆಟ್ಟಿಂಗ್ನಲ್ಲಿ ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆ ಎಂಬುದು ಇಡಿ ದಾಳಿ ವೇಳೆ ಬಯಲಾಗಿತ್ತು. ಈ ಹಿಂದೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು 103 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದರು.
ಈಗ ವೀರೇಂದ್ರ ಪಪ್ಪಿಗೆ ಸೇರಿದ ಎರಡು ಲಾಕರ್ಗಳಲ್ಲಿ ಮತ್ತೆ 50.33 ಕೋಟಿ ರೂ.ಮೌಲ್ಯದ ಚಿನ್ನದ ಗಟ್ಟಿ ಇಟ್ಟಿರುವುದನ್ನು ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 150 ಕೋಟಿ ರೂ.ದಾಟಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.