ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿಕ್ಷಣದ ವ್ಯಾಪ್ತಿ ವಿಸ್ತಾರವಾಗಿರುವ ಇಂದಿನ ದಿನಗಳಲ್ಲಿ, ವಿದ್ಯಾರ್ಥಿಗಳು ತಮಗೆ ಸರಿ ಹೊಂದುವ ಉನ್ನತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ವಿಜಯ ಕರ್ನಾಟಕ ಪತ್ರಿಕೆ ಹಮ್ಮಿಕೊಂಡಿರುವ ವಿಕ ಎಜುಕೇಶನ್ ಫೇರ್ ಅತ್ಯುತ್ತಮ ವೇದಿಕೆ ಕಲ್ಪಿಸಿದೆ ಎಂದು ಕೆಎಲ್ಇ ಅಕಾಡೆಮಿ ಆಫ್ ಹೈಯ್ಯರ್ ಎಜುಕೇಶನ್ ಎಂಡ್ ರೀಸರ್ಚ್ ನ (ಕಾಹೆರ್) ಉಪ ಕುಲಪತಿ ಡಾ. ವಿವೇಕ್ ಸಾವೋಜಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿರುವ ವಿಕ ಎಜುಕೇಶನ್ ಫೇರ್ಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಉನ್ನತ ಶಿಕ್ಷಣ ಕೇವಲ ಸಾಂಪ್ರದಾಯಿಕ ಕೋರ್ಸ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ವೈವಿಧ್ಯತೆ ಹೆಚ್ಚಿದೆ, ಅಂತೆಯೇ ಅಪರಿಮಿತ ಅವಕಾಶಗಳೂ ಇವೆ. ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ಶೈಕ್ಷಣಿಕ ಅವಕಾಶಗಳಿದ್ದರೂ ಇಂಥಹ ಕೋರ್ಸ್ ಗಳ ಬಗ್ಗೆ ಮಾಹಿತಿ ಒದಗಿಸಲು ಸೂಕ್ತ ವೇದಿಕೆಯ ಕೊರತೆ ಇತ್ತು. ವಿಕ ಎಜುಕೇಶನ್ ಫೇರ್ ಈ ಕೊರತೆಯನ್ನು ನೀಗಿಸಿದೆ. ವಿದ್ಯಾರ್ಥಿಗಳು ಈ ಅವಕಾಶದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ. ಶ್ರೀ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಮೇಳದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಎಲ್ಲ ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ ಸೂಚನೆ ಪಡೆದುಕೊಳ್ಳಬೇಕು. ವಿಜಯ ಕರ್ನಾಟಕ ಪತ್ರಿಕೆ ಎಜುಕೇಶನ್ ಫೇರ್ ಆಯೋಜಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿನ ಅವಕಾಶಗಳನ್ನು ತೆರೆದಿಟ್ಟಿದೆ. ಎಂದು ನುಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರೆಜಿಸ್ಟ್ರಾರ್ ಡಾ. ಎ. ಎಸ್. ದೇಶಪಾಂಡೆ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ಅನೇಕ ಬದಲಾವಣೆಗಳನ್ನು ಕಾಣುತ್ತಿದೆ. ಅವಕಾಶಗಳು ವಿಶ್ವದೆಲ್ಲೆಡೆ ತೆರೆದುಕೊಳ್ಳುತ್ತಿವೆ. ಆಸಕ್ತಿ ಇರುವ ಕ್ಷೇತ್ರ ಮತ್ತು ಶಿಕ್ಷಣ ಪಡೆದ ವಿಷಯ ಎರಡೂ ಒಂದೇ ಆಗಿದ್ದರೆ ಯಶಸ್ಸು ಗಳಿಸಲು ಪೂರಕವಾಗುತ್ತದೆ. ಹಾಗಾಗಿ ವಿಕ ಎಜುಕೇಶನ್ ಫೇರ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ:
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಓದಿದ ವಿಷಯವೇ ಬೇರೆ, ಆಸಕ್ತಿ ಇರುವ ಕ್ಷೇತ್ರವೇ ಬೇರೆ ಆದರೆ ಜೀವನದುದ್ದಕ್ಕೂ ಆಸಕ್ತಿಯೇ ಇಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಕೊರಗಬೇಕಾಗುತ್ತದೆ. ಹಾಗಾಗಿ ಪಿಯುಸಿ ಮುಗಿದ ಬಳಿಕ ಉನ್ನತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವುದು ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ತಾವೂ ಸಹ ಜಮಖಂಡಿ ತಾಲೂಕಿನ ಗ್ರಾಮೀಣ ಭಾಗದಿಂದ ಬಂದಿದ್ದು ಉನ್ನತ ಶಿಕ್ಷಣದ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಗೊಂದಲಗಳ ಅರಿವು ತಮಗೂ ಇದೆ. ಎಷ್ಟೋ ಕೋರ್ಸ್ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಎಜುಕೇಶನ್ ಫೇರ್ ಆಯೋಜಿಸಿದ್ದು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಾಗಿದೆ ಎಂದರು.
ಮೊದಲೆಲ್ಲ ನಮ್ಮ ದೇಶದಿಂದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹೊರದೇಶಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ಬೇರೆ ಬೇರೆ ದೇಶಗಳಿಂದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತ ಶಕ್ತಿಶಾಲಿಯಾಗಿ ಹೊರ ಹೊಮ್ಮುತ್ತಿದೆ. ಅದರಲ್ಲೂ ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದೆ. ದೇಶದಲ್ಲಿ ಅತೀ ಹೆಚ್ಚು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು, ಐಐಟಿ, ಐಐಎಂ, ಐಐಎಸ್ಸಿ ಮೊದಲಾದ ಉನ್ನತ ಶಿಕ್ಷಣ ಸಂಸ್ಥೆಗಳು ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರೀಜನಲ್ ಮ್ಯಾನೇಜರ್ ಮೋಹನ್ ಎಂ. ಪಾಟೀಲ್, ಕಾಹೆರ್ ರಜಿಸ್ಟ್ರಾರ್ ಡಾ. ಎ. ವಿ. ಕೋಠಿವಾಲೆ ಮೊದಲಾದವರು ಇದ್ದರು.
ಸಾಲ ಸೌಲಭ್ಯ, ಕೋರ್ಸ್ ಗಳ ಮಾಹಿತಿ:
ವಿಕ ಎಜುಕೇಶನ್ ಫೇರ್ನಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ, ವೈದ್ಯಕೀಯ, ನರ್ಸಿಂಗ್ ಮತ್ತು ಪೂರಕ ಕೋರ್ಸ್ ಗಳ ಬಗ್ಗೆ ತಜ್ಞರು ಉಪಯುಕ್ತ ಮಾಹಿತಿ ನೀಡಿದರು.
ಎಸ್ಬಿಐನ ರೀಜನಲ್ ಮ್ಯಾನೇಜರ್ ಮೋಹನ್ ಎಂ. ಪಾಟೀಲ ಅವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಇರುವ ಸಾಲ ಸೌಲಭ್ಯದ ಕುರಿತು ವಿವರಿಸಿದರು. ಭಾರತದ ಯಾವುದೇ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಗರಿಷ್ಠ 7.50 ಲಕ್ಷ ರೂ.ವರೆಗೆ ಸರಳ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಕೋರ್ಸ್ ಮುಗಿದ 1 ವರ್ಷದವರೆಗೂ ಸರಳ ಬಡ್ಡಿಯನ್ನೇ ಆಕರಿಸಲಾಗುತ್ತದೆ. ವಿದೇಶದ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚನ ಸಾಲ ಸೌಲಭ್ಯವಿದೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಮತ್ತು ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದ ವಿವಿಧ ಯೋಜನೆಗಳಡಿ ಬಡ್ಡಿಯಲ್ಲಿ ರಿಯಾಯಿತಿ ಇದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಅವಕಾಶ ಹೆಚ್ಚಿದೆ:
ಕಾಹೆರ್ ರೆಜಿಸ್ಟ್ರಾರ್ ಡಾ. ವಿ.ಎ. ಕೋಠಿವಾಲೆ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಪರಿಣಿತಿ ಪಡೆದವರಿಗೆ ಪ್ರಸ್ತುತ ವಿಶ್ವದಾದ್ಯಂತ ಬೇಡಿಕೆ ಇದೆ. ತಜ್ಞ ವೈದ್ಯರು, ದಂತ ವೈದ್ಯಕೀಯ ಅಲ್ಲದೆ ಶುಷ್ರೂಶಕರಿಗೆ ಬೇಡಿಕೆ ಹೆಚ್ಚಿದೆ. ಇದಲ್ಲದೇ ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾಗಿರುವ ಉಪಕರಣಗಳ ತಂತ್ರಜ್ಞಾನದ ಶಿಕ್ಷಣ ಪಡೆದವರಿಗೂ ಅಪಾರ ಬೇಡಿಕೆ ಇದೆ ಎಂದು ಹೇಳಿದರು. ಕೆಎಲ್ಇ ಶಿಕ್ಷಣ ಸಂಸ್ಥೆಗಳಲ್ಲಿ ಈ ಎಲ್ಲ ಕೋರ್ಸ್ ಗಳು ಲಭ್ಯವಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು ಎಂದರು.
ವಿದ್ಯಾರ್ಥಿಗಳಿಂದ ವ್ಯಾಪಕ ಸ್ಪಂದನೆ:
ನಗರದ ಗಾಂಧಿ ಭವನದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಕ ಎಜುಕೇಶನ್ ಫೇರ್ಗೆ ಮೊದಲ ದಿನವೇ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು. ಸಾವಿರಾರು ವಿದ್ಯಾರ್ಥಿಗಳು ಎಜುಕೇಶನ್ ಫೇರ್ನಲ್ಲಿ ಪಾಲ್ಗೊಂಡು ಉನ್ನತ ಶಿಕ್ಷಣಕ್ಕಿರುವ ವಿವಿಧ ಅವಕಾಶಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದುಕೊಂಡರು. ಭಾನುವಾರವೂ ಎಜುಕೇಶನ್ ಫೇರ್ ಮುಂದುವರೆಯಲಿದ್ದು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಆಗಮಿಸಲಿದ್ದಾರೆ.
ಉನ್ನತ ಶಿಕ್ಷಣಕ್ಕಿರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ವಿಕ ಎಜುಕೇಶನ್ ಫೇರ್ ಹಮ್ಮಿಕೊಳ್ಳಲಾಗಿದೆ. 25 ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳು, ಕಾಲೇಜುಗಳು ಎಜುಕೇಶನ್ ಫೇರ್ನಲ್ಲಿ ಭಾಗವಹಿಸಿವೆ. ವಿದ್ಯಾರ್ಥಿಗಳು ಪ್ರತಿಯೊಂದು ವಿವಿಗಳು ಹಾಗೂ ಕಾಲೇಜುಗಳ ಸ್ಟಾಲ್ಗಳಿಗೆ ತೆರಳಿ, ಆಯಾ ಕಾಲೇಜುಗಳಲ್ಲಿ ಇರುವ ಕೋರ್ಸ್ ಗಳು, ಕಲಿಕೆಯ ಅವಕಾಶಗಳು, ಬೋಧನಾ ವಿಧಾನ, ಸೌಲಭ್ಯಗಳು, ಆಯಾ ಕೋರ್ಸ್ ಗಳಿಗೆ ಇರುವ ಉದ್ಯೋಗಾವಕಾಶಗಳ ಬಗ್ಗೆ ಕಾಲೇಜುಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆಯುತ್ತಿದ್ದ ದೃಷ್ಯ ಕಂಡುಬಂದಿತು.
ಸಾವಿರಾರು ವಿದ್ಯಾರ್ಥಿಗಳು :
ಬೆಳಗಾವಿ ನಗರ, ಜಿಲ್ಲೆಯ ವಿವಿಧ ಭಾಗಗಳ ಹಾಗೂ ಹೊರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಎಜುಕೇಶನ್ ಫೇರ್ನಲ್ಲಿ ಪಾಲ್ಗೊಂಡರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸರದಿ ಸಾಲಿನಲ್ಲಿ ನಿಂತು ಕೌಂಟರ್ನಲ್ಲಿ ನೋಂದಣಿ ಮಾಡಿಸಿಕೊಂಡು ವಿವಿಧ ವಿವಿ ಮತ್ತು ಕಾಲೇಜುಗಳ ಸ್ಟಾಲ್ಗಳಿಗೆ ತೆರಳಿದರು.
ಬಳಿಕ ವಿಷಯ ತಜ್ಞರು ಮತ್ತು ಗಣ್ಯರು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ಉಪನ್ಯಾಸ ನೀಡಿದರು. ಉಪಯುಕ್ತ ಮಾಹಿತಿಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರು ಎಜುಕೇಶನ್ ಫೇರ್ ಆಯೋಜನೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಸೇನೆ ಒಡೆದ ಬಳಿಕ ಬಿಜೆಪಿ ಹಾದಿ ಸುಗಮ; ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧಿಸ್ತಾರಾ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ