ಪ್ರಸ್ತುತ ಅವಧಿಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ನನ್ನ ಗುರಿ – ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸ್ತುತ 2023 -2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಸೋಮನಟ್ಟಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಸಾಕಷ್ಟು ಶಾಲಾ ಕೊಠಡಿ, ಸ್ಮಾರ್ಟ್ ಕ್ಲಾಸ್, ಆಟದ ಮೈದಾನ, ವಿಜ್ಞಾನ ಉಪಕರಣ, ಕ್ರೀಡಾ ಸಾಮಗ್ರಿ ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಜೊತೆಗೆ ದೇವಸ್ಥಾನಗಳನ್ನು, ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿ, ಶೈಕ್ಷಣಿಕ ಕ್ರಾಂತಿ ಮಾಡುತ್ತೇನೆ ಎಂದು ಅವರು ಹೇಳಿದರು.

ತುಮ್ಮರಗುದ್ದಿ ಹಾಗೂ ಸೋಮನಟ್ಟಿಗೆ ತಲಾ ಇನ್ನೊಂದು ಕೊಠಡಿ, ಶಾಲೆಗೆ ಅಗತ್ಯವಾದ ಎಲ್ಲ ಡೆಸ್ಕ್ ಗಳನ್ನು ಒದಗಿಸುತ್ತೇನೆ. ತುಮ್ಮರಿಗುದ್ದಿಗೆ ವಿಜ್ಞಾನ ಉಪಕರಣ, ಸ್ಮಾರ್ಟ್ ಕ್ಲಾಸ್ ರೂಂ ಒದಗಿಸುತ್ತೇನೆ. ಸೋಮನಟ್ಟಿಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಯಲ್ಲಮ್ಮನ ಗುಡಿಯನ್ನು ನಿರ್ಮಾಣ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಆಯಾ ಗ್ರಾಮಗಳ ಹಿರಿಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಆಯಾ ಶಾಲೆಗಳ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ