*ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮ ವಹಿಸಬೇಕು: ವಿನಯ ನಾವಲಗಟ್ಟಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಗೊಂಡಿವೆ. ಆದರೆ ತಾಂತ್ರಿಕ ದೋಷ, ಜಾಗೃತಿ ಕೊರತೆಯಿಂದ ಕೆಲವು ತಾಲೂಕುಗಳಲ್ಲಿ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆಗಳು ಪಡೆಯುವಲ್ಲಿ ಫಲಾನುಭವಿಗಳು ವಂಚಿತರಾಗುತ್ತಿದ್ದು, ಅಂತವರನ್ನು ಗುರುತಿಸಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಸಂವಾದ ಸಭಾಂಗಣದಲ್ಲಿ ಬುಧವಾರ (ನ.27) ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಸಾಮಾನ್ಯರ ಏಳಿಗೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಆಹಾರ ಇಲಾಖೆ ಸಂಬಂಧಿಸಿದಂತೆ ಪಡಿತರ ವಿತರಣೆಗೆ ಆಧಾರ್ ಜೋಡಣೆಯಲ್ಲಿ ವಿಳಾಸ, ಹೆಸರು ವ್ಯತ್ಯಾಸ, ಮೊಬೈಲ್ ಸಂಖ್ಯೆ ಅಂಕ್ ಇಲ್ಲದೇ ಇರುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಕೂಡಲೇ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಕಾರ್ಯಕ್ರಮವಾಗಿವೆ. ಅರ್ಹರೆಲ್ಲರೂ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಒಳಪಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಯಾವುದೇ ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ಹೊರಗುಳಿಯಬಾರದು. ಈ ಹಿನ್ನೆಲೆ ಪ್ರಮಾಣಿಕವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಡಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದರು.
ಈ ವೇಳೆ ಮಾತನಾಡಿದ ಯರಗಟ್ಟಿ ತಾಲೂಕಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಗೋಪಾಲ ದಳವಾಯಿ ಮಾತನಾಡಿ ಯರಗಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆಗಳು ನಡೆಯುತ್ತಿಲ್ಲ. ಕಳೆದ 3 ಬಾರಿ ಜಿಲ್ಲಾ ಮಟ್ಟದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಈವರೆಗೆ ಸಭೆಗಳ ಆಯೋಜನೆ ಕುರಿತು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಮಾತನಾಡಿ ಎಲ್ಲ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಯರಗಟ್ಟಿ ಪಟ್ಟಣ ಪಂಚಾಯತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಕಾರಣ ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕರ ಗಮನಕ್ಕೆ ತರುವ ನಿಟ್ಟಿನಲ್ಲಿ ಅವರ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿ ಜೊತೆ ಸಭೆ ನೆಡೆಸಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಟ್ಟುನಿಟ್ಟಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3 ವಿಭಾಗಗಳಡಿಯಲ್ಲಿ (ಚಿಕ್ಕೋಡಿ, ಬೆಳಗಾವಿ, ಧಾರವಾಡ) ಒಟ್ಟು 15 ಬಸ್ ಘಟಕಗಳಿಂದ ಒಟ್ಟು 1529 ಬಸ್ ಗಳು ಪ್ರತಿ ದಿನ ಕಾರ್ಯಾಚರಣೆಯಲ್ಲಿ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಪೂರ್ವದಲ್ಲಿ ಪ್ರತಿದಿನ ಸರಾಸರಿ 5.40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಪ್ರಾರಂಭದ ನಂತರ ಪ್ರತಿದಿನ ಸರಾಸರಿ ಒಟ್ಟು 7.75 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಒಟ್ಟು 2.35 ಲಕ್ಷ ಪ್ರಯಾಣಿಕರು ಸಂಖ್ಯೆಯಲ್ಲಿ ಪ್ರತಿದಿನ ಹೆಚ್ಚಳಗುತ್ತಿದೆ. ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಹೆಸ್ಕಾಂ, ಜಿಲ್ಲಾ ಪಂಚಾಯತ್, ಸಾರಿಗೆ ಸಂಸ್ಥೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸದಸ್ಯರು, ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ