*ಅನುದಾನಿತ ಶಾಲೆಗಳ ಅತಿಥಿ ಶಿಕ್ಷಕರಿಗೂ ವೇತನಕ್ಕೆ ಪ್ರಯತ್ನ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅನುದಾನಿತ ಶಾಲೆಗಳ ಅತಿತಿ ಶಿಕ್ಷಕರಿಗೂ ಸರಕಾರದಿಂದ ವೇತನ ನೀಡುವ ಕುರಿತು ಪ್ರಯತ್ನ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಭಾನುವಾರ ಬೆಳಗಾವಿಯ ಗೃಹ ಕಚೇರಿಯಲ್ಲಿ ವಿಶ್ವ ಭಾರತ ಸೇವಾ ಸಮಿತಿ ವತಿಯಿಂದ ನಿವೃತ್ತ ಶಿಕ್ಷಕರಿಗೆ, ಸಾಧಕ ಶಿಕ್ಷಕರಿಗೆ ಹಾಗೂ ಸಾಧಕ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿಕ್ಷಕರು ಹಾಗೂ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು. ಅನುದಾನಿತ ಶಾಲೆಗಳ ಅತಿತಿ ಶಿಕ್ಷಕರಿಗೂ ಸರಕಾರದಿಂದ ವೇತನ ನೀಡುವಂತೆ ಬಹಳಷ್ಟು ಸಂಸ್ಥೆಗಳ ಪ್ರತಿನಿಧಿಗಳು ನನಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಶಿಕ್ಷಕರ ಸ್ಥಾನ ಸಣ್ಣದಲ್ಲ, ಜನಸಾಮಾನ್ಯರಿಂದ ರಾಷ್ಟ್ರಪತಿಯವರೆಗೆ ಎಲ್ಲರ ಸಾಧನೆಯ ಹಿಂದೆ ಶಿಕ್ಷಕರ ಪಾತ್ರವಿದೆ. ಹಾಗಾಗಿ ಸಮಾಜದಲ್ಲಿ ಶಿಕ್ಷಕರಿಗೆ ದೊಡ್ಡ ಗೌರವವಿದೆ. ನಾನು ಈ ಸ್ಥಾನಕ್ಕೇರಲು ಶಿಕ್ಷಕರೇ ಕಾರಣ. ಶಿಕ್ಷಕರು ಕಲಿಸಿಕೊಟ್ಟ ಸಂಸ್ಕೃತಿ, ಪರಂಪರೆಯನ್ನು ನಾನೆಂದೂ ಮರೆತಿಲ್ಲ. ಹಾಗಾಗಿ ನಾನು ಶಿಕ್ಷಕರಿಗೆ ಸದಾ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.
ವಿಶ್ವ ಭಾರತ ಸೇವಾ ಸಮಿತಿ ಕಳೆದ 66 ವರ್ಷದಿಂದ ಬಹಳ ದೊಡ್ಡ ಕೆಲಸ ಮಾಡುತ್ತಿದೆ. ಬಹಳಷ್ಟು ಜನರಿಗೆ ಭವಿಷ್ಯ ಕೊಟ್ಟಿದೆ. ಈ ಸಂಸ್ಥೆಗೆ ಅಗತ್ಯವಾದ ಎಲ್ಲ ರೀತಿಯ ನೆರವನ್ನು ನೀಡಲು ನಾನು ಸಿದ್ಧನಿದ್ದೇನೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವರಾದ ಭರಮು ಪಾಟೀಲ, ಮಾಜಿ ಶಾಸಕರಾದ ಪರಶುರಾಮ ಬಾವು ನಂದಿಹಳ್ಳಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ವಿಶ್ವ ಭಾರತ ಸೇವಾ ಸಮಿತಿಯ ಅಧ್ಯಕ್ಷರಾದ ವಿಜಯ ನಂದಿಹಳ್ಳಿ, ಶಿಕ್ಷಣಾಧಿಕಾರಿ ಆಂಜನೇಯ ಆರ್.ಕೆ, ಮನೋಹರ ಬೆಳಗಾಂವ್ಕರ್, ಯಲ್ಲಪ್ಪ ಬೆಳಗಾಂವ್ಕರ್, ಬಸವರಾಜ ಹಟ್ಟಿಹೊಳಿ, ಬವರಾಜ ತೆರಸೆ, ಯಶವಂತ ಸೋನಾರ್ ಮುಂತಾದವರು ಉಪಸ್ಥಿತರಿದ್ದರು.