ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕುಡಿದು ಬಂದು ತಂದೆ-ತಾಯಿಗೆ ಹೊಡೆದ ಸಿಟ್ಟಿನಿಂದ ಸ್ವಂತ ತಮ್ಮನೇ ಅಣ್ಣನನ್ನು ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆದಿದ್ದಾನೆ.
ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ ಮುರಕಟ್ನಾಳದಲ್ಲಿ ಈ ಘಟನೆ ನಡೆದಿದೆ. ಬಾಳಪ್ಪ ಮಾಡಮ್ಮಗೇರಿ ಎಂಬಾತ ತನ್ನ ಸ್ವಂತ ಅಣ್ಣ ಯಲ್ಲಪ್ಪ ಮಾಡಮ್ಮಗೇರಿಯನ್ನು ಇನ್ನಿಬ್ಬರ ಸಹಾಯದೊಂದಿಗೆ ಕೊಲೆ ಮಾಡಿದ್ದ. ಜೂನ್ 2ರಂದು ದೂರು ದಾಖಲಾಗಿದ್ದು, ರಾಮದುರ್ಗ ಬಿ.ಎಸ್.ಪಾಟೀಲ, ಸಿಪಿಐ ಶ್ರೀನಿವಾಸ ಹಂಡ, ಪಿಎಸ್ಐ ವಿಜಯ ಕಾಂಬಳೆ ಮತ್ತು ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೆ ಸಹಾಯ ಮಾಡಿದ ಮುರಕಟ್ನಾಳದ ಪರಪ್ಪ ಬಾಳಕಪ್ಪ ಪರಕನಟ್ಟಿ ಹಾಗೂ ಮೆಳ್ಳಿಕೇರಿಯ ಅಶೋಕ ಬಸಪ್ಪ ಜುಟ್ಟನವರ್ ಅವರನ್ನು ಸಹ ಬಂಧಿಸಲಾಗಿದೆ.
 
					 
				 
					 
					 
					 
					
 
					 
					 
					


