ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -‘ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 136 ಸೀಟು, ಬಿಜೆಪಿ 66 ಸ್ಥಾನ ಪಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
‘ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 136 ಸೀಟು, ಬಿಜೆಪಿ 66 ಸ್ಥಾನ ಪಡೆಯಲಿದೆ. 100 ಕ್ಷೇತ್ರಗಳಲ್ಲಿ ಒಂದು ಅರ್ಜಿಗಳಿದ್ದು, ನಮ್ಮಲ್ಲಿ ಐದಾರು ಚುನಾವಣೆ ಸೋತಿರುವ ಕ್ಷೇತ್ರದಲ್ಲೂ 10 ಅರ್ಜಿಗಳು ಬಂದಿವೆ. ಇದರ ಅರ್ಥ ಏನು? ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲ ಎನ್ನುತ್ತಿದ್ದರು. ಅಶೋಕ್ ಅವರು 10 ಜನ ಶಾಸಕರು ಬರುತ್ತಾರೆ ಎಂದು ಹೇಳಿದ್ದಾರೆ. ಅವರು ತಡ ಯಾಕೆ ಮಾಡುತ್ತಿದ್ದಾರೆ? ಅವರಿಗೆ ಮಾತ್ರ ಸಂಕ್ರಾಂತಿ ಬರುವುದಿಲ್ಲ, ನಮಗೂ ಸಂಕ್ರಾಂತಿ ಬರುತ್ತದೆ’ ಎಂದು ತಿಳಿಸಿದರು.
ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲ ಯಾವ ಸಂದೇಶ ಸಾರುತ್ತದೆ ಎಂದು ಕೇಳಿದಾಗ, ‘ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ತಮ್ಮ ನಾಯಕರ ಪರವಾಗಿ ಭಾವನೆ, ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ಹೇಳಿ ನೋಡೋಣ. ಬಿಜೆಪಿಯಲ್ಲಿನ ಕಿತ್ತಾಟದ ಬಗ್ಗೆ ಪಟ್ಟಿ ನೀಡಲೇ?’ ಎಂದು ಕೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಒಪ್ಪಿಕೊಂಡಿದೆ:
ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ವಿಚಾರಕ್ಕೆ ಕಿತ್ತಾಟದ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ವಿಚಾರವಾಗಿ ನಮ್ಮಲ್ಲಿ ಕಿತ್ತಾಟದ ಬಗ್ಗೆ ಒಂದು ಘಟನೆಯೂ ಸಿಗದಿದ್ದರೂ ಈ ವಿಚಾರ ಚರ್ಚೆಗೆ ಅಕಾಶ ಮಾಡಿಕೊಟ್ಟಿದ್ದೀರಿ. ಆಡಳಿತ ಪಕ್ಷದಲ್ಲಿನ ಆಂತರಿಕ ಭಿನ್ನಮತ ಹೆಚ್ಚು ಚರ್ಚೆ ಆಗುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಿವಕುಮಾರ ಹೇಳಿದರು.
ಇಂದು ಏನೇ ಚರ್ಚೆ ಮಾಡಿದರೂ ಒಂದು ಪ್ರಶ್ನೆ ಉಳಿಯುತ್ತದೆ. ಅದು ಪ್ರಜಾಪ್ರಭುತ್ವ ಉಳಿಯಬೇಕು. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಪ್ರಜಾಪ್ರಭುತ್ವ ಉಳಿಯಬೇಕು. ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ತಯಾರು ಮಾಡುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜೀವ್ ಗಾಂಧಿ ಅವರು ತಂದರು. ಇಡೀ ದೇಶ ಹಾಗೂ ಸಂವಿಧಾನ ಅದಕ್ಕೆ ಒಪ್ಪಿದೆ. ಆದರೆ ಡಬಲ್ ಇಂಜಿನ್, ಜನಪರ, ಜನಹಿತ, ಭಾವನೆ ಹಂಚಿಕೊಳ್ಳುವ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯವರು ಜನರ ಮುಂದೆ ಹೋಗಲು ಯಾಕೆ ಹೆದರುತ್ತಿದ್ದಾರೆ ಎಂಬುದು ಪ್ರಮುಖ ಪ್ರಶ್ನೆ ಎಂದರು.
ಬಿಜೆಪಿಗೆ ಭಯ ಏಕೆ?:
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆ ಮಾಡಲು ಸರ್ಕಾರಕ್ಕೆ ಭಯ ಯಾಕೆ? ಅಂದರೆ ರಾಜ್ಯದ ಮತದಾರರ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಚುನಾವಣೆ ಪೈಕಿ 11 ಕಾಂಗ್ರೆಸ್, 11 ಬಿಜೆಪಿ ಗೆಲ್ಲುತ್ತದೆ. ಪದವಿಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಂಡ್ಯ ಹಾಗೂ ಬೆಳಗಾವಿ ಮತದಾರರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಇನ್ನು ಉಪಚುನಾವಣೆಯಲ್ಲಿ ಅವರೊಂದು ನಾವೊಂದು ಗೆಲ್ಲುತ್ತಿದ್ದೇವೆ. ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವವರಿಗೆ ಶಕ್ತಿ ಹೆಚ್ಚು, ಅದರೂ ನಾವು ಸಮಾನ ಸಾಧನೆ ಮಾಡಿದ್ದೇವೆ.
ಜಿಲ್ಲಾ ಹಾಗೂ ಪಂಚಾಯ್ತಿ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿದ್ದು, ಈ ಚುನಾವಣೆ ಯಾಕೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಮೊರೆ ಹೋಗಿದ್ದೆವು. ಈಗ ನ್ಯಾಯಾಲಯ ಸರ್ಕಾರಕ್ಕೆ 5 ಲಕ್ಷ ದಂಡ ವಿಧಿಸಿದೆ. ಹೀಗಾಗಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕಳೆದ ಮೂರು ವರ್ಷಗಳಿಂದ ಈ ಸರ್ಕಾರಕ್ಕೆ ಜನರ ಹೊಟ್ಟೆ ತುಂಬಿಸಲು, ಬದುಕು ಕಟ್ಟಿಕೊಳ್ಳಲು ಒಂದು ಕಾರ್ಯಕ್ರಮ ನೀಡಲು ಸಾಧ್ಯವಾಗಿಲ್ಲ. ಇವರ ಯೋಜನೆ ಕೇವಲ ಕಾಗದದ ಮೇಲೆ ಮಾತ್ರ ಇದೆಯೇ ಹೊರತು ಜನರನ್ನು ತಲುಪಿಲ್ಲ. ದೇಶದಲ್ಲೇ ಅತ್ಯಂತ ಉತ್ತಮ ಆಡಳಿತ ರಾಜ್ಯ ಕರ್ನಾಟಕವಾಗಿತ್ತು. ಕಳೆದ ಮೂರು ವರ್ಷಗಳಿಂದ ಈ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ.
ಈ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ನಮ್ಮ ಕಾಲಾವಧಿಯಲ್ಲಿ ಸಾಕಷ್ಟು ನೇಮಕಾತಿ ಮಾಡಿದ್ದೇವೆ. ನಮ್ಮ ಕಾಲದಲ್ಲಿ ಒಂದು ನೇಮಕಾತಿ ಅಕ್ರಮ ನಡೆದಿಲ್ಲ. ಅಕ್ರಮ ನಡೆದಿರುವುದನ್ನು ಸಾಬೀತುಮಾಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಆದರೆ ನಿಮ್ಮ ಅಧಿಕಾರದಲ್ಲಿ ಪ್ರತಿ ಇಲಾಖೆಯಲ್ಲಿ ಹುದ್ದೆ ನೇಮಕಾತಿ ಮಾಡುವಾಗ ನೇಮಕಾತಿ ಅಕ್ರಮ ನಡೆದಿದ್ದು, ಎಡಿಜಿಪಿ ಮಟ್ಟದ ಅಧಿಕಾರಿಗಳಿಂದ ಎಲ್ಲಿ ಹಂತದ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಉತ್ತರ ಪತ್ರಿಕೆ ತಿದ್ದಿ ಅಕ್ರಮ ಮಾಡಿರುವುದು ಐಟಿ ಕ್ಯಾಪಿಟಲ್ ನಲ್ಲಿ ನಡೆದಿದೆ. ಇದಕ್ಕಿಂತ ದೊಡ್ಡ ಅಪಮಾನ ಬೇರೊಂದಿಲ್ಲ ಎಂದು ಹೇಳಿದರು.
ಲಂಚ – ಮಂಚ
ಇನ್ನು ಲಂಚ ಹಾಗೂ ಮಂಚದ ವಿಚಾರದಲ್ಲಿ ಇಬ್ಬರು ಸಚಿವರ ತಲೆತಂಡವಾಗಿದೆ. ಇವರು ರಾಜೀನಾಮೆ ನೀಡುವ ಮುನ್ನ ಅವರಿಗೆ ಕ್ಲೀನ್ ಚಿಟ್ ನೀಡುತ್ತಾರೆ. ಅವರ ಬೆಂಬಲವಾಗಿ ನೀಡುವಾಗ ಅಧಿಕಾರಿಗಳಿಗೆ ಬಿ ರಿಪೋರ್ಟ್ ನೀಡುವಂತೆ ಸೂಚಿಸುತ್ತಾರೆ. ಅವರ ಸಾಧನೆಗೆ ನಾವು ಅಭಿನಂದನೆ ಸಲ್ಲಿಸಬೇಕು.
ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗಳಿಗೆ ದೂರು ನೀಡಿದರು, ಕೆಲವರು ಭ್ರಷ್ಟಾಚಾರ ಕಿರುಕುಳ ತಾಳಲಾರದೆ ಪ್ರಾಣ ಬಿಟ್ಟಿದ್ದಾರೆ. ಆಮೂಲಕ ದೇಶದಲ್ಲೇ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿ ರಾಜ್ಯಕ್ಕೆ ನೀಡಿದ್ದಾರೆ. ಕೆಂಪಣ್ಣ ಅವರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧ ತನಿಖೆ ಯಾಕಿಲ್ಲ? ಗುತ್ತಿಗೆದಾರರು ದಾಖಲೆ ನೀಡುತ್ತೇವೆ ಎಂದು ಹೇಳಿದ್ದರೂ ಯಾವ ಅಧಿಕಾರಿ ವಿರುದ್ಧ ತನಿಖೆ ಮಾಡಲಿಲ್ಲ. ಇನ್ನು ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕರಿಗೆ ನೋಟೀಸ್ ಕೊಟ್ಟರು. ಇದಕ್ಕಿಂತ ದೊಡ್ಡ ಅಪಮಾನ ಬೇಕೆ? ಎಂದು ಪ್ರಶ್ನಿಸಿದರು.
ಇನ್ನು ಕೋವಿಡ್ ಸಮಯದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಕುಟುಂಬಕ್ಕೆ ಸಾಂತ್ವನ ಹೇಳಲಾಗಲಿಲ್ಲ. ಮಾನವೀಯತೆಯಿಂದ ಒಬ್ಬ ಮಂತ್ರಿ, ಶಾಸಕ, ಅಧಿಕಾರಿಗಳು ಹೋಗಿ ಪರಿಹಾರ ನೀಡಲಿಲ್ಲ. ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಯಿತು. ವಿರೋಧ ಪಕ್ಷವಾಗಿ ನಾವು ಮನೆ ಮನೆಗೆ ಹೋಗಿ, ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಬೇಕಾಯಿತು. ಕೋವಿಡ್ ನಿಂದ ಸತ್ತವರಿಗೆ ಘೋಷಣೆ ಮಾಡಿದ ಪರಿಹಾರವನ್ನು ನೀಡಲು ಸಾಧ್ಯವಾಗಲಿಲ್ಲ. ಕೋವಿಡ್ ನಿಂದ ಸಂಕಷ್ಟ ಅನುಭವಿಸಿದವರಿಗೆ ಕೇಂದ್ರ ಸರ್ಕಾರದ ಮೂಲಕ 20 ಲಕ್ಷ ಕೋಟಿ ರಾಜ್ಯ ಸರ್ಕಾರದಿಂದ 1800 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದಿರಿ. ಇದರಿಂದ ಯಾರಿಗೆ ಎಷ್ಟು ಸಹಾಯ ಮಾಡಲಾಯಿತು ಎಂದು ಸರ್ಕಾರ ಪಟ್ಟಿ ನೀಡಿ ಎಂದು ಕೇಳಿದರೂ ಕೊಡಲಿಲ್ಲ. ಇದೊಂದು ಸರ್ಕಾರವೇ? ಇದು ಡಬಲ್ ಇಂಜಿನ್ ಸರ್ಕಾರವೇ? ಎಂದು ಅವರು ಪ್ರಶ್ನಿಸಿದರು.
ಈ ಎಲ್ಲ ಹಗರಣದ ನಂತರ ಈಗ ಮತದಾರರ ಮಾಹಿತಿ ಕಳವು ಮಾಡಲಾಗಿದೆ. ಮನೆಗಳಿಲ್ಲದಿದ್ದರೂ ಮನೆ ಇದೆ ಎಂದು ಮತದಾರರನ್ನು ಸೇರಿಸಿದ್ದಾರೆ. ಕಾಂಗ್ರೆಸ್ ಮತದಾರರನ್ನು ತೆಗೆದು ಹಾಕಿದ್ದಾರೆ. 8.7 ಸಾವಿರ ಬಿಎಲ್ಓ ಸ್ಥಾನವನ್ನು ಖಾಸಗಿಯವರಿಗೆ ನೀಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಈ ರೀತಿ ಚುನಾವಣೆ ಗೆಲ್ಲಬೇಕಾ? ಬಂಧಿತ ಅಧಿಕಾರಿಗಳು ಶಾಸಕರು ಹಾಗೂ ಮಂತ್ರಿಗಳ ಆದೇಶದಂತೆ ಕೆಲಸ ಮಾಡಿದ್ದಾರೆ. ಅವರ ಮೇಲೆ ಯಾರೂ ಪ್ರಕರಣ ದಾಖಲಿಸುತ್ತಿಲ್ಲ. ಇಂತಹ ಅಕ್ರಮ ನಡೆಯುತ್ತಿದೆ. ಇನ್ನು ಸಿಎಸ್ ಸಿ ಹೆಸರಲ್ಲಿ ಕೆಲವು ರೈತರ ಖಾತೆಗೆ ಕೇಂದ್ರ ಸರ್ಕಾರದ ಹಣ ಹಾಕಿ ಅವರಿಂದ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳು ಮೃಧು ಧೋರಣೆ ತೋರುತ್ತಿವೆ. ಈ ರಾಜ್ಯದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿದಿದೆ ಎನ್ನುತ್ತೀರಿ, ಆದರೆ ತನಿಖೆ ಮಾಡಿ ಶಿಕ್ಷೆ ನೀಡಿ. ನಿಮ್ಮನ್ನು ತಡೆಯುತ್ತಿರುವವರು ಯಾರು? ಎಂದರು.
*ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬ್ಲಾಸ್ಟ್ ಪ್ರಕರಣ ಬಳಕೆ*
ಮತ ಮಾಹಿತಿ ಕಳವು ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ ತಂದರು. ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದರು. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ.
ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬರುತ್ತಿದೆ ಎಂದು ಹೇಳಿದ್ದಾರೆ. ಇದರಲ್ಲಿ ಶಿವಮೊಗ್ಗಕ್ಕೆ, ಕರಾವಳಿ, ಉಡುಪಿ ಜಿಲ್ಲೆಗಳಿಗೆ ಯಾಕೆ ಬಂಡವಾಳ ಹೋಗುತ್ತಿಲ್ಲ? ಯಾವ ಜಿಲ್ಲೆಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಎಂದು ಸರ್ಕಾರ ಪಟ್ಟಿ ಬಿಡುಗಡೆ ಮಾಡಲಿ.
ಸರ್ಕಾರ ಕೇವಲ ಭಾವನೆ ಮೂಲಕ ದೇಶ ಕಟ್ಟಲು, ರಾಜ್ಯ ಕಟ್ಟಲು ಹೊರಟಿದ್ದಾರೆ. ಜನರ ಹೊಟ್ಟೆಪಾಡು ಮರೆತಿದ್ದಾರೆ. ಸರ್ಕಾರ ಕೊನೆ ದಿನಗಳನ್ನು ತಲುಪಿದೆ. ಜನ ಈ ಸರ್ಕಾರ ಕಿತ್ತೊಗೆಯಲು ತೀರ್ಮಾನಿಸಿದ್ದಾರೆ. ಮಾಧ್ಯಮಗಳು ನ್ಯಾಯ ನೀಡುವ ಸ್ಥಾನದಲ್ಲಿದೆ. ನ್ಯಾಯ ನೀಡುವ ಸ್ಥಾನದಿಂದ ಅನ್ಯಾಯ ಬರಬಾರದು. ರಾಜ್ಯದ ಗೌರವ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕು ಎಂದು ಪಕ್ಷದ ಅಧ್ಯಕ್ಷನಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಪೂರ್ವನಿಯೋಜಿತ
ಕುಕ್ಕರ್ ಬ್ಲಾಸ್ಟ್ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದಾಗ ‘ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯ್ತು? ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ. ಮತದಾನದ ಕಳವು ಇಡೀ ದೇಶದಲ್ಲಿ ಆಗಿರಲಿಲ್ಲ. ಈಗ ಇದನ್ನು ಮಾಡಿ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ’ ಎಂದರು.
ಈ ಬಾರಿ ನಿಮ್ಮ ಸರ್ಕಾರ ಬಂದರೆ ಮತ್ತೆ ಆಪರೇಷನ್ ಕಮಲ ನಡೆಯದಂತೆ ಹೇಗೆ ತಡೆಯುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 136 ಸೀಟು, ಬಿಜೆಪಿ 66 ಸ್ಥಾನ ಪಡೆಯಲಿದೆ. 100 ಕ್ಷೇತ್ರಗಳಲ್ಲಿ ಒಂದು ಅರ್ಜಿಗಳಿದ್ದು, ನಮ್ಮಲ್ಲಿ ಐದಾರು ಚುನಾವಣೆ ಸೋತಿರುವ ಕ್ಷೇತ್ರದಲ್ಲೂ 10 ಅರ್ಜಿಗಳು ಬಂದಿವೆ. ಇದರ ಅರ್ಥ ಏನು? ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲ ಎನ್ನುತ್ತಿದ್ದರು. ಅಶೋಕ್ ಅವರು 10 ಜನ ಶಾಸಕರು ಬರುತ್ತಾರೆ ಎಂದು ಹೇಳಿದ್ದಾರೆ. ಅವರು ತಡ ಯಾಕೆ ಮಾಡುತ್ತಿದ್ದಾರೆ? ಅವರಿಗೆ ಮಾತ್ರ ಸಂಕ್ರಾಂತಿ ಬರುವುದಿಲ್ಲ, ನಮಗೂ ಸಂಕ್ರಾಂತಿ ಬರುತ್ತದೆ’ ಎಂದು ತಿಳಿಸಿದರು.
ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲ ಯಾವ ಸಂದೇಶ ಸಾರುತ್ತದೆ ಎಂದು ಕೇಳಿದಾಗ, ‘ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ತಮ್ಮ ನಾಯಕರ ಪರವಾಗಿ ಭಾವನೆ, ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ಹೇಳಿ ನೋಡೋಣ. ಬಿಜೆಪಿಯಲ್ಲಿನ ಕಿತ್ತಾಟದ ಬಗ್ಗೆ ಪಟ್ಟಿ ನೀಡಲೇ?’ ಎಂದು ಕೇಳಿದರು.
ದೆಹಲಿ ನಾಯಕರು ನಿಮ್ಮನ್ನು ಕೂರಿಸಿ ಮಾತನಾಡಿಸಿದ್ದು ಸುಳ್ಳಾ ಎಂಬ ಪ್ರಶ್ನೆಗೆ, ‘ನಮ್ಮನ್ನು ಯಾರೂ ಕೂರಿಸಿ ಮಾತನಾಡಿಲ್ಲ. ನನ್ನನ್ನು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಇತರ ನಾಯಕರನ್ನು ಕರೆಸಿ ಚುನಾವಣೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ನಾನು ರಾಜ್ಯದ ಅಧ್ಯಕ್ಷನಾಗಿ ಸಮೀಕ್ಷೆ ಮಾಡಿಸಿದ್ದೆ, ರಾಷ್ಟ್ರೀಯ ನಾಯಕರೂ ಸಮೀಕ್ಷೆ ಮಾಡಿಸಿದ್ದಾರೆ. ಅದಕ್ಕಾಗಿ ಒಂದು ವಿಭಾಗವನ್ನೇ ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಕುರಿತು ಕೆಲವು ಮಾರ್ಗದರ್ಶನ ನೀಡಿದ್ದಾರೆ. ನಾವು ಒಟ್ಟಾಗಿ ಇರುತ್ತೇವೆ, ನಮ್ಮಲ್ಲಿ ವ್ಯಕ್ತಿಪೂಜೆ ಇಲ್ಲ, ಪಕ್ಷ ಪೂಜೆ ಎಂದು ಹೇಳಿ ಅಧಿಕಾರ ಪಡೆದೆ. ಇದು ಅಚಲ. ಇದಕ್ಕೆ ನಾವೆಲ್ಲರೂ ಒಪ್ಪಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.
*ವೋಟರ್ ಐಡಿ ಹಗರಣ ಹೊರ ಬರುತ್ತಿದ್ದಂತೆ ಅಲ್ಲಿ ಕುಕ್ಕರ್ ಬಾಂಬ್ ಸ್ಫೋಟ…! – ಡಿ.ಕೆ.ಶಿವಕುಮಾರ ಆರೋಪ*
https://pragati.taskdun.com/d-k-shivakumarmangalore-bomb-blast-casestatment/
https://pragati.taskdun.com/in-the-wake-of-the-massacre-of-democracy-the-chief-minister-should-resign-as-a-moral-responsibility-dk-shivakumar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ