
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮಹಾಪೌರರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಅಧ್ಯಕ್ಷಾಧಿಕಾರಿಗಳು, ಬೆಳಗಾವಿ ಮಹಾನಗರ ಪಾಲಿಕೆ (ಚುನಾವಣೆ) ಹಾಗೂ ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗದ ಎಸ್.ಬಿ. ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಮಾರ್ಚ 15 ರಂದು ಮಧ್ಯಾಹ್ನ 1 ಘಂಟೆಗೆ 23ನೇ ಅವಧಿಗೆ ಚುನಾವಣೆ ಪ್ರಕ್ರಿಯೆ ನಡೆಯಲಿವೆ. ಮಹಾಪೌರ (ಸಾಮಾನ್ಯ) ಹಾಗೂ ಉಪ ಮಹಾಪೌರ (ಸಾಮಾನ್ಯ ಮಹಿಳೆ) ಸ್ಥಾನಕ್ಕೆ ಮೀಸಲಿವೆ.
ಚುನಾವಣೆ ವೇಳಾಪಟ್ಟಿ
ಮಾರ್ಚ 15 ರಂದು ಮುಂಜಾನೆ 9 ರಿಂದ 11 ಘಂಟೆಯವರೆಗೆ ಮಹಾಪೌರರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ನಂತರ ಮಧ್ಯಾಹ್ನ 1 ಘಂಟೆಗೆ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನದ ನಾಮಪತ್ರಗಳ ಪರಿಶೀಲನೆ, ಕ್ರಮಬದ್ದ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಅಭ್ಯರ್ಥಿಯು ಒಬ್ಬರಕ್ಕಿಂತ ಹೆಚ್ಚು ಇದ್ದಲ್ಲಿ ಕೈ ಎತ್ತುವ ಮೂಲಕ ಮತದಾನ. ಪರವಾಗಿ ಕೈ ಎತ್ತಿದ ಸದಸ್ಯರ ಸಹಿ ಪಡೆಯುವುದು, ವಿರುದ್ಧವಾಗಿ ಕೈ ಎತ್ತಿದ ಸದಸ್ಯರ ಸಹಿ ಪಡೆಯುವುದು, ತಟಸ್ಥ ಇರುವ ಸದಸ್ಯರ ಸಹಿ ಪಡೆಯುವುದು, ಮೊದಲ ಅಭ್ಯರ್ಥಿಯ ಸಹಿ ಪಡೆದ ನಂತರ ಮುಂದಿನ ಅಭ್ಯರ್ಥಿಯ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ಕೈಗೊಳ್ಳುವುದು, ಮತ್ತು ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಮಾಡಲಾಗುವು ಎಂದು ಅಧ್ಯಕ್ಷಾಧಿಕಾರಿಗಳು, ಬೆಳಗಾವಿ ಮಹಾನಗರ ಪಾಲಿಕೆ (ಚುನಾವಣೆ) ಹಾಗೂ ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗದ ಎಸ್.ಬಿ. ಶೆಟ್ಟೆಣ್ಣವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.