*ದಶಕದ ಬಳಿಕ ಜಮ್ಮು ಕಾಶ್ಮೀರ ವಿಧಾನಸಭೆಗೆ ಇಂದು ಚುನಾವಣೆ*
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರಕಾರ 2019ರಲ್ಲಿ 370ನೇ ವಿಧಿ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ನಿರ್ಣಯ ಕೈಗೊಂಡು 5 ವರ್ಷಗಳ ವಿರಾಮದ ನಂತರ ಕಾಶ್ಮೀರ ಚುನಾವಣೆಗೆ ನಡೆಸುತ್ತಿದೆ.
ದಶಕದ ಬಳಿಕ ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆಯ ಮತದಾನ ಪ್ರಕ್ರಿಯೆಗೆ ಇಂದು ಚಾಲನೆ ದೊರೆಯಲಿದೆ. ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ಒಟ್ಟು 219 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಮ್ಮು ಪ್ರದೇಶದ 43 ಕ್ಷೇತ್ರಗಳ ಪೈಕಿ 8ರಲ್ಲಿ ಮತ್ತು ಕಾಶ್ಮೀರದ 47 ಕ್ಷೇತ್ರಗಳ ಪೈಕಿ 16ರಲ್ಲಿ ಒಟ 24 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಕಣಿವೆಯಲ್ಲಿ 16 ಸ್ಥಾನಗಳಿಗಾಗಿ ಕಣದಲ್ಲಿರುವ 155 ಅಭ್ಯರ್ಥಿಗಳ ಪೈಕಿ 67 ಜನರು ಪಕ್ಷೇತರರಾಗಿದ್ದಾರೆ. ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ ಕೇವಲ 49 ಅಭ್ಯರ್ಥಿಗಳು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಸೇರಿದ್ದು, 39 ಅಭ್ಯರ್ಥಿಗಳು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇತರ ಪಕ್ಷಗಳಿಗೆ ಸೇರಿದವರಾಗಿದ್ದಾರೆ.
ಸೆ.25ರಂದು 2ನೇ ಹಂತ, ಅ.1ರಂದು 3ನೇ ಹಂತದ ಮತದಾನ ನಡೆಯಲಿದೆ. ಅ.8ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ನಿಮಿತ್ತ ಅರೆ ಸೇನಾ ಪಡೆ ಸೇರಿ ಬಹುಸ್ತರದ ಬಿಗಿ ಭದ್ರತೆ ಕಲ್ಪಿಸಲಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಸುಧಾರಣೆ ಕಂಡಿದೆ. ಆದರೆ, ಇದಕ್ಕೂ ಮುನ್ನ ನಡೆದ ಹಾಗೂ ಕಳೆದ ಮೂರು ದಶಕಗಳಿಂದ ಇಲ್ಲಿನ ಮತದಾನ ಪ್ರಮಾಣವು ತೀರಾ ಕಡಿಮೆ ಇತ್ತು. ಸಂಸತ್ತಿನ ಚುನಾವಣೆಯ ಯಶಸ್ಸು ಇದೀಗ ವಿಧಾನಸಭಾ ಚುನಾವಣೆಗೆ ಆತ್ಮವಿಶ್ವಾಸ ಮೂಡಿಸಿದೆ.
ಇದೇ ಹುಮ್ಮಸ್ಸು ರಾಜಕೀಯ ಪ್ರಚಾರಕ್ಕೆ ಮುನ್ನುಡಿಯಾಗಿದ್ದು, ಮನೆ ಮನೆ ಪ್ರಚಾರ, ರೋಡ್ ಶೋ ಮತ್ತು ಕ್ಯಾಲಿಗಳು ಕಣಿವೆ ರಾಜ್ಯದ ಪ್ರಜಾಪ್ರಭುತ್ವಕ್ಕೆ ಮೆರಗು ತಂದಿದೆ.
ಈ ಬಾರಿ ಎನ್ಸಿಪಿ ಹಾಗೂ ಪಿಡಿಪಿ ವಿರುದ್ಧ ಜನಬೆಂಬಲ ಹೊಂದಿರುವವರು ಕಣದಲ್ಲಿರುವುದರಿಂದ ಸ್ಪರ್ಧೆ ರೋಚಕತೆ ಸೃಷ್ಟಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಈ ಸಲ ಜನ ಭಯದಿಂದ ಮುಕ್ತವಾಗಿ ಮನೆಗಳಿಂದ ಹೊರ ಬಂದು ಮತ ಚಲಾಯಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅವಿರೋಧವಾಗಿ ಆಯ್ಕೆ ಆಗುತ್ತಿದ್ದ ಅಬ್ದುಲ್ಲಾ ಮುತ್ತಿ ಅಂತವರಿಗೆ ಈ ಭಾರಿಯ ಸ್ಪರ್ಧೆ ಕಠಿಣವಾಗಿರುವ ಸಾಧ್ಯತೆ ಹೆಚ್ಚಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ