ವಿದ್ಯುತ್ ಶಾಕ್: ದೇವಸ್ಥಾನದಲ್ಲಿ ಇಬ್ಬರು ಮಹಿಳೆಯರ ಸಾವು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ, ಪರಿಹಾರದ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೇವಸ್ಥಾನದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಮಹಿಳೆಯರು ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಬೆಳಗಾವಿ ತಾಲೂಕಿನ ಸುಳೇಬಾವಿಯಲ್ಲಿ ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ. ಸುಳೇಭಾವಿ ಗ್ರಾಮದ ಸವಿತಾ ಫಕೀರಪ್ಪ ಒಂಟಿ(34) ಹಾಗೂ ಕಲಾವತಿ ಮಾರುತಿ ಬಿದರವಾಡಿ(41) ಮೃತಪಟ್ಟಿದ್ದಾರೆ. ಶ್ರೀ ಮಹರ್ಷಿ ದೇವಸ್ಥಾನ ಸ್ವಚ್ಛಗೊಳಿಸುವಾಗ ಘಟನೆ ನಡೆಯಿತು.
ದೇವಸ್ಥಾನದಲ್ಲಿ ಮಹಿಳಾ ಸಂಘದ ವಾರದ ಸಭೆ ನಡೆಸಿದ ಬಳಿಕ ದೇವಸ್ಥಾನವನ್ನು ಎಲ್ಲ ಮಹಿಳೆಯರು ಸ್ವಚ್ಛಗೊಳಿಸಿದ್ದರು. ಸ್ವಚ್ಛ ಮಾಡಿದ ನೀರಿನಲ್ಲಿ ವಿದ್ಯುತ್ ತಂತಿ ಕಟ್ ಆಗಿ ಕೆಳಕ್ಕೆ ಬಿದ್ದಿತ್ತು. ಎಲ್ಲ ಕೆಲಸ ಮುಗಿಸಿ ಹೊರಗೆ ಬರುವಾಗ ಕಬ್ಬಿಣದ ಗೇಟ್ ಹಾಕುವಾಗ ಓರ್ವ ಮಹಿಳೆಗೆ ವಿದ್ಯುತ್ ಸ್ಪರ್ಶವಾಗಿದೆ. ಕೂಡಲೇ ಈಕೆಯನ್ನು ರಕ್ಷಿಸಲು ಹೋದ ಮತ್ತೊಬ್ಬ ಮಹಿಳೆಗೂ ವಿದ್ಯುತ್ ತಗುಲಿದೆ.
ವಿದ್ಯುತ್ ಸ್ಪರ್ಶಗೊಂಡು ಸವಿತಾ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೋರ್ವ ಮಹಿಳೆ ಕಲಾವತಿಯನ್ನು ಕೂಡಲೇ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಳೇಬಾವಿಯಲ್ಲಿ ನಡೆದ ದುರ್ಘಟನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮಹಿಳೆಯರ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.