Kannada NewsKarnataka NewsLatestPolitics

*ರೈತರಿಗೆ ಕೊಂಚ ನಿರಾಳ; ಇಂದಿನಿಂದ 7 ಗಂಟೆ ವಿದ್ಯುತ್ ಪೂರೈಕೆ ಘೋಷಿಸಿದ ಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತರ ಪಂಪ್ ಸೆಟ್ ಗಳಿಗೆ ಇಂದಿನಿಂದ 7 ಗಂಟೆ ವಿದ್ಯುತ್ ಪೂರೈಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹ ಕಚೇರಿ ಕ್ರ‍ಿಷ್ಣಾದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ರಾಯಚೂರು, ಬಳ್ಳಾರಿ ಥರ್ಮಲ್ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪತ್ತಿಯಾಗುತ್ತಿದೆ. 3200 ಮೆಗಾ ವ್ಯಾಟ್ ಹೆಚ್ಚು ಉತ್ಪತ್ತಿ ಮಾಡಬೇಕು. ರಾಜ್ಯದ ವಿದ್ಯುತ್ ಬೇರೆಯವರಿಗೆ ಕೊಡಬಾರದು ಎಂದು ನಿರ್ಣಯಿಸಲಾಗಿದೆ ಎಂದರು.

ರಾಜ್ಯದಲ್ಲಿ ವಿದ್ಯತ್ ಕೊರತೆಯಿದೆ ಎಂದು ನೀರಾವರಿ ಪಂಪ್‍ಸೆಟ್‍ಗಳಿಗೆ ಏಳು ಗಂಟೆಗಳ ಕಾಲ ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡಲು ಮೊದಲೇ ಘೋಷಣೆ ಮಾಡಿದ್ದೆವು. ಕೆಲವು ಜನ ಸತತವಾಗಿ ಮೂರು ಫೇಸ್‍ನಲ್ಲಿ 5 ಗಂಟೆ ವಿದ್ಯುತ್ ನೀಡಿದರೆ ಸಾಕು ಎಂದಿದ್ದರು. ಅದಕ್ಕಾಗಿ 5 ಗಂಟೆಗಳ ಕಾಲ 3 ಫೇಸ್‍ನಲ್ಲಿ ವಿದ್ಯುತ್ ನೀಡುವಂತೆ ಸೂಚನೆ ನೀಡಲಾಗಿತ್ತು. ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೈತರು ಭೇಟಿ ಮಾಡಿ ಭತ್ತ ಬೆಳೆಯುವುದರಿಂದ 5 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸಾಕಾಗುವುದಿಲ್ಲ, 7 ಗಂಟೆಗಳ ಕಾಲ ನೀಡಬೇಕೆಂದು ಎಂದು ಮನವಿ ಮಾಡಿದರು. ಕಬ್ಬು ಹಾಗೂ ಭತ್ತ ಕಟಾವಿಗೆ ಬಂದಿರುವುದರಿಂದ ಈ ಭಾಗದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಎಂದು ಸೂಚನೆ ನೀಡಲಾಗಿದೆ. ಉಳಿದ ಭಾಗಗಳಿಗೆ ನೀಡುತ್ತಿದ್ದ 5 ಗಂಟೆಗಳ ವಿದ್ಯುತ್ ನ್ನು 7 ಗಂಟೆಗಳ ಕಾಲ ನೀಡಲು ಸಾಧ್ಯವಾಗುತ್ತದೆ ಎಂದು ಇಂದಿನ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಗಿದೆ ಎಂದರು.

ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳ:
ರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳಿದ್ದು, ರಾಜ್ಯದಲ್ಲಿ ಥರ್ಮಲ್, ಜಲವಿದ್ಯುತ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದು. ಥರ್ಮಲ್ ಘಟಕವು 1000 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ. ಸುಮಾರು 2400 ರಿಂದ 3200 ಮೆ.ವ್ಯಾ, ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಕಬ್ಬು ಅರೆಯುವುದು ಪ್ರಾರಮಭವಾಗಿ ಕೋ-ಜನರೇಷನ್ ಆಗಿರುವುದರಿಂದ 450 ಮೆ.ವ್ಯಾಟ್ ಉತ್ಪಾದನೆಯಾಗಿದೆ. ಕೂಡ್ಲಗಿಯಲ್ಲಿ 150 ಮೆ.ವ್ಯಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ ಹಾಗೂ ಖರೀದಿ ಮಾಡುತ್ತಿರುವುದರಿಂದ ಹೆಚ್ಚು ವಿದ್ಯುತ್ ದೊರೆಯಲಿದೆ. ಹಾಗಾಗಿ ಇಂದಿನಿಂದ 7 ತಾಸು ವಿದ್ಯುತ್‍ನ್ನು ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದೇವೆ. ಕೈಗಾರಿಕೆಗಳಿಗೆ, ಗೃಹಬಳಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ. ಪಂಪ್‍ಸೆಟ್‍ಗಳಿಗೆ ನೀಡುವ ವಿದ್ಯುತ್ ಸಹಾಯಧನವನ್ನು ಸರ್ಕಾರವೇ ನೀಡಿದೆ. 13100 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ ಎಂದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂಧನ ಇಲಾಖೆ ಪರಿಶೀಲನಾ ಸಭೆಯ ಮುಖ್ಯಾಂಶಗಳು:

2022 ನೇ ಇಸವಿಗೆ ಹೋಲಿಸಿದರೆ 2023 ರಲ್ಲಿ ವಿದ್ಯುತ್‌ ಬೇಡಿಕೆ ಸರಾಸರಿ ಶೇ. 43 ರಷ್ಟು ಹೆಚ್ಚಿದೆ

ಅಕ್ಟೋಬರ್‌ ತಿಂಗಳಲ್ಲಿ 15,978 ಮೆಗಾವ್ಯಾಟ್‌ ಬೇಡಿಕೆ ದಾಖಲಾಗಿದೆ. ವಿದ್ಯುತ್‌ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 45 ರಷ್ಟು ಹೆಚ್ಚಿದೆ

ಕೃಷಿ ಬಳಕೆಯಲ್ಲಿ ಶೇ. 55ರಿಂದ 119 ರಷ್ಟು ಹೆಚ್ಚಳವಾಗಿದೆ. ಇತರ ವಿಭಾಗಗಳಲ್ಲಿ ಶೇ. 9 ರಿಂದ 14 ರಷ್ಟು ಹೆಚ್ಚಳವಾಗಿದೆ. ಮಳೆ ಕೊರತೆ, ವಾಡಿಕೆಗಿಂತ ಮೊದಲೇ ಐಪಿ ಸೆಟ್‌ ಗಳ ಬಳಕೆ ಪ್ರಾರಂಭವಾಗಿರುವುದು ಹಾಗೂ ಕೋವಿಡ್‌ 19 ರ ನಂತರದ ಆರ್ಥಿಕ ಪುನಶ್ಚೇತನ ಇದಕ್ಕೆ ಕಾರಣವಾಗಿದೆ

ಕಳೆದ ಬಾರಿ ಪ್ರಗತಿ ಪರಿಶೀಲನೆಯ ನಂತರ ರಾಯಚೂರು, ಬಳ್ಳಾರಿ ಉಷ್ಣವಿದ್ಯುತ್‌ ಸ್ಥಾವರಗಳ ಉತ್ಪಾದನೆ ಹೆಚ್ಚಾಗಿದೆ. ಉತ್ತರ ಪ್ರದೇಶ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶಗಳಿಂದ ವಿದ್ಯುತ್‌ ಪಡೆಯಲಾಗುತ್ತಿದೆ

ಸೆಕ್ಷನ್‌ 11 ಅಡಿ ಬೇರೆ ರಾಜ್ಯಗಳಿಗೆ ವಿದ್ಯುತ್‌ ನೀಡದಂತೆ ಆದೇಶ ಹೊರಡಿಸಿ, ವಿದ್ಯುತ್‌ ಪಡೆಯಲಾಗುತ್ತಿದೆ. ಆ ಮೂಲಕ ವಿದ್ಯುತ್‌ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್‌ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ

ವಿವಿಧ ವಿದ್ಯುತ್‌ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ರೈತರ ಅಗತ್ಯತೆಗನುಗುಣವಾಗಿ ಐದರಿಂದ ಏಳು ಗಂಟೆಗಳ ಅವಧಿಗೆ ನಿರಂತರ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ

ರಾಜ್ಯದಾದ್ಯಂತ ಐಪಿ ಸೆಟ್‌ಗಳಿಗೆ ನಿರಂತರ ಏಳು ಗಂಟೆಗಳ ಅವಧಿಗೆ ವಿದ್ಯುತ್‌ ಒದಗಿಸಲು 600 ಮೆಗಾವ್ಯಾಟ್‌/ಗಂಟೆ ಹಾಗೂ ಪ್ರತಿದಿನಕ್ಕೆ 14 ಮಿಲಿಯನ್‌ ಯುನಿಟ್‌ಗಳ ಅಗತ್ಯವಿದೆ

ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಪ್ರತಿದಿನ ಏಳು ತಾಸು ವಿದ್ಯುತ್‌ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು

ಇದಕ್ಕಾಗಿ ಸುಮಾರು 1500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅನುದಾನದ ಉಳಿತಾಯ, ಮರುಹಂಚಿಕೆಯ ಮೂಲಕ ಈ ವೆಚ್ಚ ಭರಿಸಲಾಗುವುದು
.
ಮುಂದಿನ ವರ್ಷದಲ್ಲಿ ಐಪಿ ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯನ್ನು ಸೌರವಿದ್ಯುತ್‌ ಮೂಲದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ (Solarisation of EIP Feeders). ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಹಗಲು ವೇಳೆಯಲ್ಲಿಯೇ ರೈತರಿಗೆ ವಿದ್ಯುತ್‌ ನೀಡಲು ಇದರಿಂದ ಅನುಕೂಲವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button