ಲೇಖನ: ದತ್ತಾತ್ರೇಯ ಎನ್. ಭಟ್ಟ
ಬೆಂಗಳೂರಿನ ಕರ್ನಾಟಕ ಚಿತ್ರ ಕಲಾ ಪರಿಷತ್ ದ ಗ್ಯಾಲರಿಯೊಂದರಲ್ಲಿ ಸದ್ಯ ಬೆಂಗಳೂರಿಗರಾಗಿರುವ ಉತ್ತರ ಕನ್ನಡ ಜಿಲ್ಲೆ ಮೂಲದ ಕಲಾವಿದ ಗಣಪತಿ ಎಸ್. ಹೆಗಡೆಯವರ ‘ಎಂಟೆಲೆಕಿ’ಶೀರ್ಷಿಕೆಯ ಏಕವ್ಯಕ್ತಿ ಕಲಾಪ್ರದರ್ಶನ ಜನೇವರಿ22-2023ರಿಂದ ಆಯೋಜನೆಗೊಂಡಿದ್ದು ಜನೇವರಿ-29-2023ರ ವರೆಗೂ ನಡೆಯಲಿದೆ.
ದಾವಣಗೆರೆಯ ಸರ್ಕಾರಿ ಕಲೆ ಮತ್ತು ಕರಕುಶಲ ಶಾಲೆ(ಈಗಿನ ದೃಶ್ಯ ಕಲಾ ಮಹಾವಿದ್ಯಾಲಯ ದಾವಣಗೆರೆ)ಯಲ್ಲಿ ಚಿತ್ರ ಕಲೆಯ ನ್ಯಾಷನಲ್ ಡಿಪ್ಲೊಮಾ ಅಭ್ಯಸಿಸಿದವರು. ಬೆಮೆಲ್ ನಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದವರು.ಸದ್ಯ ಬೆಂಗಳೂರಿನಲ್ಲಿಯೇ ‘ಕೋಬಾಲ್ಟ್ ಆರ್ಟ್ ಗ್ಯಾಲರಿ’ ಸ್ಥಾಪಿಸಿ,ಕಲೆ-ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ವೇದಮಂತ್ರಗಳು, ಅವುಗಳ ತಾತ್ವಿಕ ಅರ್ಥವಂತಿಕೆಯಿಂದ ಬಹಳ ಪ್ರಭಾವಿತರಾಗಿರುವ ಗಣಪತಿ ಹೆಗಡೆ ಈ ಪ್ರದರ್ಶನದಲ್ಲಿ ಆ ಕುರಿತಾಗಿ ಅವರು ಕ್ಯಾನವಾಸ್ ಎಂಬ ಮಾಧ್ಯಮದ ಮೇಲೆ ಅಭಿವ್ಯಕ್ತಿಸಿದ ಚಿತ್ರಗಳನ್ನೇ ಇರಿಸಿದ್ದಾರೆ.
‘ಪಂಚಭೂತಗಳಿಂದ ಪ್ರಕೃತಿಯಲ್ಲಿಯ ಶಕ್ತಿ ಸಂಚಲನ,ಆ ಅಗಾಧ, ಅಚಿಂತ್ಯ ಶಕ್ತಿ ಸಕಲ ಚರಾಚರ ಜೀವಜಾಲವನ್ನು ನಿಯಂತ್ರಿಸುವಿಕೆ.. ಇವೇ ಮೊದಲಾದ ಕೌತುಕಗಳ ಕುರಿತು-ರಹಸ್ಯ ಕುರಿತು ವಿವರಿಸುವ ವೇದ ಮಂತ್ರಗಳು, ಉಪನಿಷತ್ ವಾಕ್ಯಗಳು ನನ್ನನ್ನು ದೃಶ್ಯ ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸಲು ಪ್ರೇರೇಪಿಸಿದವು’ ಎಂದು ನುಡಿಯುತ್ತಾರೆ.
ಪ್ರಸ್ತುತ ಕಲಾಪ್ರದರ್ಶನದಲ್ಲಿ ಗಣಪತಿ ಎಸ್. ಹೆಗಡೆಯವರ 32ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಸರಿಸುಮಾರು1ಅಡಿ×1ಅಡಿ ಅಳತೆಯ ಕ್ಯಾನವಾಸ್ದಿಂದ ಹಿಡಿದು ಸುಮಾರು 5ಅಡಿ×3ಅಡಿ ಅಳತೆಯ ಕ್ಯಾನವಾಸ್ ದಲ್ಲಿ ರಚಿಸಿದ ಕಲಾಕೃತಿಗಳು ಇಲ್ಲಿವೆ.ಚಿತ್ತಾಕರ್ಷಕ ವರ್ಣಮೇಳದೊಂದಿಗೆ ಅಲ್ಲ್ಲಲ್ಲಿ ತೆಳು ಪ್ಲಾಸ್ಟಿಕ್ ಹಾಳೆಗಳನ್ನು ಬಣ್ಣದ ಒದ್ದೆ ಸಮತಲದಲ್ಲಿ ಒತ್ತಿ ಸೃಜಿಸಿದ ಮೈವಳಿಕೆಗಳು, ಕೆಲವೆಡೆಗಳಲ್ಲಿ ಕುಂಚದ ಹಿಂಬದಿ ಮೊನೆಯಿಂದ ಗೀರಿ ಮೂಡಿಸಿದ ಗೀಟುಗಳು ಇವೇ ಮೊದಲಾದ ತಂತ್ರಗಾರಿಕೆ ಉಪಯೋಗಿಸಿ ಕಲಾಕೃತಿಗಳ ಒಟ್ಟೂ ಅವಕಾಶದಲ್ಲಿ ಆಕೃತಿ ವಿಶಿಷ್ಟತೆಯೊಟ್ಟಿಗೆ ಶ್ರೀ ಸಾಮಾನ್ಯರನ್ನು ಸೆಳೆದಿಡಬಲ್ಲ ತಾಜಾತನದ ವರ್ಣವೈವಿಧ್ಯ-ಅವುಗಳಲ್ಲಿ ಹಾಳತವಾದ ಏರಿಳಿತ ಇವೆಲ್ಲ ಈ ಕಲಾಕೃತಿಗಳ ವಿಶೇಷ ಲಕ್ಷಣಗಳಾಗಿ ತೋರ್ಪಡಿಕೆಯಾಗಿವೆ. ಸೃಜನಶೀಲತೆಯ ತುಡಿತ -ವಿಷಯ ನಿರೂಪಣೆಯನ್ನು ದೃಶ್ಯಾಭಿವ್ಯಕ್ತಿಯಲ್ಲಿ ‘ಜೀವಂತ ಪೂರ್ಣ’ವಾಗಿ ಹೊರಹೊಮ್ಮಿಸಬೇಕೆಂಬ ಕಾಳಜಿ-ಆಸಕ್ತಿ-ಪರಿಶ್ರಮ ಎದ್ದು ಕಾಣುತ್ತದೆ.
ಆಕ್ರಿಲಿಕ್ ಬಣ್ಣದಲ್ಲಿಯೇ ಇವೆಲ್ಲವೂ ನಿರ್ವಹಣೆಗೊಂಡಿದ್ದು, ಕೆಲವು ಶೀರ್ಷಿಕೆ ಹೊಂದಿ ಪ್ರೇಕ್ಷಕರನ್ನು ಅದೇ ಚೌಕಟ್ಟಿನಲ್ಲಿಯೇ ನೋಡಲು/ಗ್ರಹಿಸಲು ಒತ್ತಾಯಿಸಿದರೆ,ಇನ್ನು ಕೆಲವು ಕಲಾಕೃತಿಗಳು ಶೀರ್ಷಿಕೆ ರಹಿತವಾಗಿದ್ದು ನೋಟಕರು ಸ್ವಚ್ಛಂದವಾಗಿ ಅವುಗಳನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತವೆ.
ದೃಶ್ಯ ಕಲಾ ಸಾಧನೆಗಾಗಿ ಕೆಂಪೇಗೌಡ ಪ್ರಶಸ್ತಿ, ಬೆಮೆಲ್ ರಾಜ್ಯೋತ್ಸವ ಪ್ರಶಸ್ತಿ, ರಾಜರಾಜೇಶ್ವರಿ ನಗರ ರೋಟರಿ ಪ್ರಶಸ್ತಿ, ಮೊದಲಾದ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿರುವ ಗಣಪತಿ ಹೆಗಡೆಯವರು ಒಂದು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರೂ ಆದವರು.
ಬಸ್ತವಾಡದಲ್ಲಿ ಗ್ರಾಮ್ ಒನ್, ಗ್ರಾಹಕರ ಸೇವಾ ಕೇಂದ್ರ ಉದ್ಘಾಟನೆ
https://pragati.taskdun.com/inauguration-of-gram-one-customer-service-center-at-bastawada/
*ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಪತ್ತೆ*
https://pragati.taskdun.com/bjp-leaderpraveen-nettaarumurder-casetwo-accused-foundsoudi-arebia/
https://pragati.taskdun.com/sslc-studentsscience-study-pakegvijana-mitra/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ