Kannada NewsKarnataka NewsLatestPolitics

*ದೃಶ್ಯ ನೋಡಿದರೆ ಕಣ್ಣೀರು ಬರುತ್ತೆ…ಮಾಜಿ ಸಿಎಂ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಈಶ್ವರ್ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕೃತಿ, ಪರಿಸರ ಉಳಿಸುವ ಬಗ್ಗೆ ಮಾತನಾಡಬೇಕು. ಆದರೆ ಅವರು ಏಕೆ ಬೇಲೂರು ತಾಲೂಕು ನಂದಗೋಡನ ಹಳ್ಳಿಯ ಅಕ್ರಮ ಮರಗಳ ಕಡಿತ ಮಾಡಿದವರ ಪರವಾಗಿ ಮಾತನಾಡಿದ್ದಾರೋ ನನಗೆ ತಿಳಿಯುತ್ತಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

126 ಮರಗಳ ಅಕ್ರಮ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯಿಸಿರುವ ಖಂಡ್ರೆ, ಮಾಜಿ ಮುಖ್ಯಮಂತ್ರಿಯವರಿಗೆ ಮಾಹಿತಿಯ ಕೊರತೆ ಇದೆ ಎನಿಸುತ್ತದೆ. “ಮುಖ್ಯಮಂತ್ರಿಗಳೇ ಮರ ಕಡಿಸಿ ಪ್ರತಾಪಸಿಂಹ ಸೋದರನ ಜಾಗದಲ್ಲಿ ಹಾಕುವಂತೆ ಹೇಳಿದ್ದಾರೆ’’ ಎಂದು ಆರೋಪಿಸಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಡಿ.16ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಹಜರ್ ಮಾಡಿದ್ದ ಬೇಲೂರು ತಹಶೀಲ್ದಾರ್ ಅವರು 300ಕ್ಕೂ ಹೆಚ್ಚು ಮರಗಳನ್ನು ಅನುಮತಿ ಇಲ್ಲದೆ ಅಕ್ರಮವಾಗಿ ಕಡಿಯಲಾಗಿದೆ. ಸರ್ಕಾರಿ ಜಾಗದಲ್ಲಿದ್ದ ಮರಗಳನ್ನೂ ಕಡಿದಿದ್ದಾರೆ. ಇದರಲ್ಲಿ ಬೀಟೆ, ಸಾಗುವಾನಿ, ಮಹಾಗನಿ ಮೊದಲಾದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮರ ಕಡಿಯಲಾಗಿದೆ. 25 ಲೋಡ್ ಮರ ಇದೆ ಎಂದು ಹೇಳಿದ್ದಾರೆ. ಕತ್ತರಿಸಿದ ಮರಗಳ ರಾಶಿ ಇರುವ ವಿಡಿಯೋ ಮತ್ತು ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನೂರಾರು ಮರಗಳನ್ನು ಕಡಿದಿರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ವಸ್ತು ಸ್ಥಿತಿ ಹೀಗಿರುವಾಗ ಕುಮಾರಸ್ವಾಮಿ ಅವರ ಪರವಾಗಿ ಮಾತನಾಡುತ್ತಿದ್ದಾರೆ ತಿಳಿಯದಾಗಿದೆ ಎಂದು ಹೇಳಿದ್ದಾರೆ.
ಅಕ್ರಮ ಮರ ಕಡಿತಲೆ ಆದಾಗ ವೃಕ್ಷ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಭೂಮಿಯ ಮಾಲಿಕರ ವಿರುದ್ಧ ನಮ್ಮ ಇಲಾಖೆಯ ಅಧಿಕಾರಿಗಳು ಡಿ.16ರಂದು ಎಫ್.ಐ.ಆರ್. ಹಾಕಿದ್ದಾರೆ. 2 ದಿನಗಳ ಬಳಿಕ ಈ ಭೂಮಿಯಲ್ಲಿ ಶುಂಠಿ ಬೆಳೆಯಲು ವಿಕ್ರಂ ಸಿಂಹ ಎಂಬುವವರು ಕರಾರು ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಸಂಸದರ ಸೋದರರೋ ಅಲ್ಲವೋ ಎಂಬುದು ಮುಖ್ಯವಲ್ಲ. ಆ ವಿಷಯ ತಮಗೆ ತಿಳಿದೂ ಇರಲಿಲ್ಲ ಎಂದು ಹೇಳಿದ್ದಾರೆ.

ಭೂ ಮಾಲೀಕರೊಂದಿಗೆ 11.12.2023ರಂದು ಅಗ್ರಿಮೆಂಟ್ ಆಗಿದೆ ಬಳಿಕ ಆ ಜಮೀನಿನಲ್ಲಿ ಮತ್ತು ಪಕ್ಕದ ಗೋಮಾಳದಲ್ಲಿ ಅಕ್ರಮವಾಗಿ ಮರ ಕಡಿಯಲಾಗಿದೆ. ಯಾವುದೇ ಬಡ ರೈತನಿಗೆ ನೂರಾರು ಮರ ಕಡಿಯುವ ಶಕ್ತಿ, ಧೈರ್ಯ ಇರುತ್ತದೆಯೇ. ಪ್ರಭಾವಿಗಳು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಅಲ್ಲವೇ ಎಂದು ಈಶ್ವರ ಖಂಡ್ರ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ವಿನಾಕಾರಣ ಪ್ರತಾಪ ಸಿಂಹ ಅವರ ಸೋದರನ ಮೇಲೆ ಸರ್ಕಾರ ಆರೋಪ ಮಾಡಿದೆ ಎಂದು ಹೇಳಿದ್ದಾರೆ. ಮೂರೂವರೆ ಎಕರೆ ಜಮೀನಿನ ಅಗ್ರಿಮೆಂಟ್ ಮಾಡಿಕೊಂಡಿರೋರು, ಏಕೆ ಆ ಕರಾರಿನಲ್ಲಿ ಸದರಿ ಜಮೀನಿನಲ್ಲಿ ಇಷ್ಟು ಮರ ಇದೆ, ಇಂತಿಂತಹ ಜಾತಿ ಮರ ಇದೆ, ಅದಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಏಕೆ ಉಲ್ಲೇಖ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸ್ವತಃ ರೈತ ಕುಟುಂಬದಿಂದ ಬಂದ ಕುಮಾರಸ್ವಾಮಿ ಅವರನ್ನೇ ಕೇಳುತ್ತೇನೆ… ಕಾಡಿನಂತೆ ದಟ್ಟವಾದ ಮರಗಳು ಇರುವ ಸ್ಥಳದಲ್ಲಿ, ನೆರಳಿನಿಂದ ಕೂಡಿದ ನೂರಾರು ಮರ ಬೇರು ಬಿಟ್ಟಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ಸಾಧ್ಯವೇ ಎಂಬ ಬಗ್ಗೆ ಉತ್ತರ ನೀಡಲಿ ಎಂದು ಕೋರಿದ್ದಾರೆ. ಇನ್ನು ಬೆಲೆ ಬಾಳುವ ಮರಗಳಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ವಿಕ್ರಂ ಸಿಂಹ ಅವರು ಕರಾರು ಮಾಡಿಕೊಂಡಿರುವುದರ ಹಿಂದಿನ ಉದ್ದೇಶ ಏನಿತ್ತು ಎಂಬುದು ಶ್ರೀಸಾಮಾನ್ಯನಿಗೂ ತಿಳಿಯುತ್ತದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ವಿರೋಧಿಗಳ ಧ್ವನಿ ಅಡಗಿಸಲು ಕಾಂಗ್ರೆಸ್ ನವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಸುಖಾ ಸುಮ್ಮನೆ ಆರೋಪಿಸಿದ್ದಾರೆ. ನೂರಾರು ಮರಗಳು ಧರೆಗೆ ಉರುಳಿರುವ ದೃಶ್ಯ ನೋಡಿದರೆ ಕಣ್ಣೀರು ಬರತ್ತೆ. ಒಂದು ಮರ ಬೆಳೆಸಲು ಹಲವು ವರ್ಷ ಬೇಕು. ನಾವು ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದರೆ, ಕೆಲವರು ಸ್ವಾರ್ಥಕ್ಕಾಗಿ ಬಡವರಿಗೆ 75 ಸಾವಿರ, 1 ಲಕ್ಷ ರೂ. ಗುತ್ತಿಗೆ ಹಣದ ಆಸೆ ತೋರಿಸಿ ಅಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಮರ ಕಡಿಯುತ್ತಿದ್ದಾರೆ. ಶುಂಠಿ ಬೆಳೆ ಹೆಸರಲ್ಲಿ ಮರ ಕಡಿಯುವ ಮಾಫಿಯಾ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಅರಣ್ಯವೇ ಉಳಿಯುವುದಿಲ್ಲ. ಇಂತಹ ಅಕ್ರಮ ಮಾಡುವವರ ಪರ ಯಾರೂ ಬ್ಯಾಟಿಂಗ್ ಮಾಡುವುದು ಸರಿಯಲ್ಲ. ಬಿಜೆಪಿಯವರೇ ಪ್ರತಾಪ ಸಿಂಹ ಪರ ನಿಲ್ಲದಿರುವಾಗ ಎಚ್.ಡಿ.ಕೆ. ಏಕೆ ಅವರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂಬುದು ಅಚ್ಚರಿ ತಂದಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಅಮಾನತು ಖಂಡ್ರೆ ಸಮರ್ಥನೆ:
ಇನ್ನು ಅಧಿಕಾರಿಗಳ ಅಮಾನತಿನ ಬಗ್ಗೆ ವಿವರಣೆ ನೀಡಿ, ಅಮಾನತು ಆದವರಲ್ಲಿ ಎಲ್ಲ ಜಾತಿ, ಸಮುದಾಯದವರೂ ಇದ್ದಾರೆ. ಆದರೆ ಕುಮಾರಸ್ವಾಮಿ ಅವರು ಒಂದು ಜಾತಿಯ ಪ್ರಸ್ತಾಪ ಮಾಡಿರುವುದು ಸರಿಯಲ್ಲ. ಎಲ್ಲ ಜಾತಿ, ಸಮುದಾಯದಲ್ಲೂ ದಕ್ಷ ಅಧಿಕಾರಿಗಳಿರುತ್ತಾರೆ, ಭ್ರಷ್ಟರೂ ಇರುತ್ತಾರೆ. ಈ ರೀತಿ ಜಾತಿ ಪ್ರಸ್ತಾಪ ಮಾಡಿರುವುದು ದುರ್ದೈವ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣ ಬೆಳಕಿಗೆ ಬಂದು 12 ದಿನ ಕಳೆದರೂ, ನೂರಾರು ಮರ ಧರೆಗೆ ಉರುಳಿದ್ದರೂ, ಕರ್ತವ್ಯಲೋಪ, ನಿರ್ಲಕ್ಷ್ಯ ವಹಿಸಿದ ಯಾವುದೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದ ಮತ್ತು ಪತ್ರಿಕೆಯಲ್ಲಿ ಬಂದಿರುವ ವರದಿ ನೋಡಿ ವರದಿ ಕೇಳುವ ತನಕ ಸಚಿವಾಲಯಕ್ಕೆ ಮಾಹಿತಿ ನೀಡದೆ, ವರದಿ ಕೇಳಿದ ನಂತರ 126 ಮರ ಕಡಿದಿದ್ದರೂ 30 ಮರ ಮಾತ್ರ ಕಡಿಯಲಾಗಿದೆ ಎಂದು ತಪ್ಪು ಮಾಹಿತಿ ನೀಡಿದವರನ್ನು ಅಮಾನತು ಮಾಡಬಾರದೆ ಎಂದು ಪ್ರಶ್ನಿಸಿದ್ದಾರೆ.

2 ಹಿಟಾಚಿ ವಾಹನ ಸೀಜ್ ಮಾಡಿದ್ದರೂ, ಸೀಜರ್ ಪಟ್ಟಿಯಲ್ಲಿ 2 ಹಿಟಾಚಿ ಉಲ್ಲೇಖ ಇದ್ದರೂ ವರದಿಯಲ್ಲಿ ಅದರ ಪ್ರಸ್ತಾಪವನ್ನೇ ಮಾಡದೆ ಕಳುಹಿಸಲಾಗಿದೆ ಇಂತಹ ಪ್ರಮಾದ ಸಹಿಸಿಕೊಳ್ಳಬೇಕೆ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.

ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್ ನಲ್ಲಿ ಕಡಿದ ಮರ ಸಾಗಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಸ್ಥಳೀಯರು ಡಿ.14ನೇ ತಾರೀಖಿನಿಂದಲೇ 4-5 ಲೋಡ್ ಮರ ಸಾಗಿಸಲಾಗಿದೆ ಎಂದು ಹೇಳುತ್ತಿದ್ದಾರೆ ಎಂಬ ವರದಿ ಇದೆ. ಯಾವ ಮರ ಸಾಗಿಸಿದ್ದಾರೆ, ಎಷ್ಟು ಮರ ಸಾಗಿಸಿದ್ದಾರೆ, ಎಲ್ಲಿಗೆ ಸಾಗಿಸಿದ್ದಾರೆ ಎಂದು ಖುದ್ದು ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಮತ್ತು ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಚಿವಾಲಯಕ್ಕೆ ತಪ್ಪು ಮಾಹಿತಿ ನೀಡುವವರನ್ನು ಅಮಾನತು ಮಾಡಿದ್ದು ತಪ್ಪೆ ಎಂದು ಪ್ರಶ್ನಿಸಿದ್ದಾರೆ ಮತ್ತು ಅಮಾನತು ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಯಾರೂ ದೊಡ್ಡವರಲ್ಲ: ಅಕ್ರಮ ಮರ ಕಡಿತಲೆ ಪ್ರಕರಣ ನಡೆದಿರುವಾಗ ಯಾವುದೇ ಜಾತಿ ಅಥವಾ ಪ್ರಭಾವಿ ಎಂಬ ವಿಚಾರ ಬರುವುದಿಲ್ಲ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನಿನ ಮುಂದೆ ದೊಡ್ಡವರಲ್ಲ. ರಸ್ತೆ ಬದಿಯಲ್ಲೇ ಕಾಡಿನಂತಿರುವ ಗೋಮಾಳದಲ್ಲಿ ಮರ ಕಡಿದಿದ್ದರೂ ಅದನ್ನು ತಡೆಯುವಲ್ಲಿ ಮತ್ತು ಪತ್ತೆ ಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮ ಜರುಗಿಸಿದೆ. ಇದು ಅಕ್ರಮವಾಗಿ ಮರ ಕಡಿಯುವ ಬೇರೆಯವರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಖಂಡ್ರೆ ತಿಳಿಸಿದ್ದಾರೆ.

50-60 ವರ್ಷ ಸ್ವಾಭಾವಿಕವಾಗಿ ಬೆಳೆದ ಬೃಹತ್ ಮರಗಳನ್ನು ಕಡಿದ ಪ್ರಕರಣದಲ್ಲಿ ತಪ್ಪಿತಸ್ಥರ ಪರ ಮತ್ತು ಅಧಿಕಾರಿಗಳ ಪರವಾಗಿ ಜಾತಿ ಹೆಸರಲ್ಲಿ ಕುಮಾರಸ್ವಾಮಿ ಅವರು ವಕಾಲತ್ತು ವಹಿಸುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button