
ಜಿಲ್ಲೆಯ ಪ್ರವಾಹಬಾಧಿತ ಸ್ಥಳಗಳಿಗೆ ಭೇಟಿ, ಹಾನಿ ಪರಿಶೀಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಸಂಪೂರ್ಣ ಸಮೀಕ್ಷೆಯಾದ ತಕ್ಷಣವೇ ಮನೆ ನಿರ್ಮಾಣ ಸೇರಿದಂತೆ ಶಾಶ್ವತ ಪರಿಹಾರವನ್ನು ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಜಿಲ್ಲೆಯ ಪ್ರವಾಹ ಬಾಧಿತ ಸ್ಥಳಗಳಿಗೆ ಶನಿವಾರ(ಸೆ.7) ಭೇಟಿ ನೀಡಿದ ಅವರು, ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಸೇತುವೆಯ ಬಳಿ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ನದಿಪಾತ್ರದಲ್ಲಿ ಬೆಳೆಹಾನಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವುದೇ ದಾಖಲಾತಿಗಳನ್ನು ಕೇಳದೇ ಪ್ರವಾಹ ಬಾಧಿತ ಎಲ್ಲ ಕುಟುಂಬಗಳಿಗೂ ಹತ್ತು ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ.
ಮನೆಗಳು ಕುಸಿದಿರುವ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆಯ ವರದಿ ಆಧರಿಸಿ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಭಿಕ್ಷೆ ಎತ್ತುವುದು ಬೇಡ
ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಹದಿನೈದು ದಿನಗಳಲ್ಲಿ ಸಂಪೂರ್ಣ ವರದಿ ನೀಡಲು ಜಿಲ್ಲಾ ಪಂಚಾಯತ ಸಿಇಓ ಗಳಿಗೆ ಸೂಚನೆ ನೀಡಲಾಗಿದೆ.
ಮಾಹಿತಿಯನ್ನು ಪಡೆದುಕೊಂಡ ಬಳಿಕ ಸಮರ್ಪಕ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಸರಕಾರ ಪರಿಹಾರ ಕೊಡದಿದ್ದರೆ ಬೆಂಗಳೂರಿನಲ್ಲಿ ಭಿಕ್ಷೆ ಎತ್ತಿ ಪರಿಹಾರ ನೀಡುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿರುವ ಕುರಿತು ಪ್ರಶ್ನಿಸಿದಾಗ, ಲಕ್ಷ್ಮಿ ಹೆಬ್ಬಾಳಕರ್ ನನ್ನ ಸಹೋದರಿ ಇದ್ದಹಾಗೆ. ಅವರು ಭಿಕ್ಷೆ ಎತ್ತುವುದು ಬೇಡ ಸರಕಾರ ಎಲ್ಲವನ್ನೂ ಸರಿಯಾಗಿ ನಿಭಾಯಿಸಲಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು, ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವರಿಸಿದರು.
ಬೆಳೆಹಾನಿಯಿಂದ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ತಕ್ಷಣ ಪರಿಹಾರ ಒದಗಿಸುವ ಅಗತ್ಯವಿದೆ. ಅದೇ ರೀತಿ ಪ್ರತಿವರ್ಷ ಪ್ರವಾಹದಿಂದ ತತ್ತರಿಸುತ್ತಿರುವ ಗ್ರಾಮಗಳಿಗೆ ಶಾಶ್ವತ ಯೋಜನೆಯನ್ನು ರೂಪಿಸಲು ಕ್ರಮಕೈಗೊಳ್ಳಬೇಕಿದೆ ಎಂದು ಸಚಿವರಿಗೆ ಮಾಹಿತಿಯನ್ನು ನೀಡಿದರು.
ಜನರ ಅಹವಾಲು ಆಲಿಕೆ
ಮಾಂಜರಿ ಗ್ರಾಮದ ಅಂಬೇಡ್ಕರ್ ಕಾಲನಿ ಮತ್ತಿತರ ಪ್ರದೇಶದಲ್ಲಿ ಸಂಚರಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಅಲ್ಲಿನ ಜನರ ಅಹವಾಲುಗಳನ್ನು ಆಲಿಸಿದರು.
ಮನೆಗಳು ಸಂಪೂರ್ಣವಾಗಿ ಶಿಥಿಲಗೊಂಡಿರುವುದರಿಂದ ಕೂಡಲೇ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಸರ್ಕಾರಕ್ಕೆ ಪರಿಸ್ಥಿತಿಯ ಸಂಪೂರ್ಣ ಅರಿವು ಇದ್ದು, ಸಮೀಕ್ಷೆ ಮುಗಿದ ಬಳಿಕ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಉಪಸ್ಥಿತರಿದ್ದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಡಾ.ಆರ್.ವಿಶಾಲ್, ಕುಡಿಯುವ ನೀರು ಸರಬರಾಜು ಯೋಜನೆಗಳ ಕುರಿತು ಸಚಿವರಿಗೆ ವಿವರಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಮತ್ತಿತರರು ಉಪಸ್ಥಿತರಿದ್ದರು.
ಇದಾದ ಪ್ರವಾಹ ಬಾಧಿತ ಯಡೂರ, ಶಿರಗುಪ್ಪಿ ಮತ್ತಿತರ ಸ್ಥಳಗಳಿಗೆ ಸಚಿವ ಈಶ್ವರಪ್ಪ ಭೇಟಿ ನೀಡಿ, ಹಾನಿಯನ್ನು ಪರಿಶೀಲಿಸಿದರು.
ಸುವರ್ಣ ಸೌಧದಲ್ಲಿ ರಾಜ್ಯಮಟ್ಟದ ಸಭೆ:
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೆ. 8 ಹಾಗೂ 9 ರಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ ಸಿಇಓ ಗಳು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿಯ ಸದಸ್ಯರ ಸಭೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಎರಡು ದಿನಗಳ ರಾಜ್ಯಮಟ್ಟದ ಸಭೆಯಲ್ಲಿ ಕೂಡ ಪ್ರವಾಹ ಬಾಧಿತ ಕುಟುಂಬಗಳಿಗೆ ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರು ಒದಗಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ