ಪ್ರತಿ ಮಹಿಳೆ ತನಗಾಗಿ ಸ್ವಲ್ಪ ಸಮಯವನ್ನಾದರೂ ಮೀಸಲಿಟ್ಟುಕೊಳ್ಳಬೇಕು – ಡಾ.ಸೋನಾಲಿ ಸರ್ನೋಬತ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವುದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಹಿಳೆಯರು ನಿರ್ಲಕ್ಷ್ಯ ವಹಿಸುವುದು ಸಲ್ಲ; ತಮ್ಮ ಮನಸಿಗೆ ಆಹ್ಲಾದ ನೀಡುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಉಳಿಸಿಕೊಳ್ಳಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತೆ, ವೈದ್ಯೆ, ಸಾಹಿತಿ ಡಾ. ಸೋನಾಲಿ ಸರ್ನೋಬತ್ ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಬೆನ್ನು ಬಿದ್ದು ನಾವು ಚಟುವಟಿಕೆಗಳಿಂದ ದೂರವಾಗುತ್ತಿದ್ದೇವೆ. ಮೊಬೈಲ್ ಹಿಡಿದು ಕುಳಿತಲ್ಲೇ ಕುಳಿತುಕೊಳ್ಳುವುದರಿಂದ ದೈಹಿಕ ವ್ಯಾಯಾಮ ಇಲ್ಲದೆ ಶರೀರದಲ್ಲಿ ರೋಗ ಹೆಚ್ಚುತ್ತಿದೆ. ದಿನವೂ ವಾಕಿಂಗ್, ಯೋಗ ಮತ್ತು ಧ್ಯಾನದ ಜತೆಜತೆಗೆ ಉತ್ತಮ ಪುಸ್ತಕಗಳ ಓದು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿ ಎಂದು ಅವರು ಹೇಳಿದರು.

ಮನೆಯಲ್ಲಿ ಗೃಹಣಿಯ ಜವಾಬ್ದಾರಿ ಜಾಸ್ತಿ ಇದ್ದು, ತಮ್ಮ ಮಕ್ಕಳು ಹಾಗೂ ಮನೆಯವರೆಲ್ಲರ ಕಾಳಜಿಯನ್ನು ಅವರು ವಹಿಸಿಕೊಳ್ಳಬೇಕು, ಆದರೆ ಈ ಜಂಜಾಟದಲ್ಲಿ ತನಗಾಗಿ ದಿನಕ್ಕೊಂದು ಗಂಟೆ ಮೀಸಲಿಟ್ಟು ಈ ಸಮಯದಲ್ಲಿ ಮನಸಿಗೆ ಮುದ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಕಿವಿಮಾತು ಹೇಳಿದರು.
ಸಮಾರಂಬದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರು, ಯಾವುದೇ ಕಥೆ ರಚಿಸುವುದು ಎಂದರೆ ಆ ಕತೆಗಾರ ಪ್ರತಿಯೊಂದು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬೇಕು. ಯಾವ ಪ್ರದೇಶದ ಕತೆ ಬರೆಯುವನೋ ಅಲ್ಲಿನ ಬಗ್ಗೆ ತಿಳಿದುಕೊಳ್ಳಬೇಕು. ತಾನು ಅನುಭವಿಸಿ ಬರೆದಾಗಲೇ ಕಥೆ ಸ್ವಾರಸ್ಯ ಉಳಿಸಿಕೊಂಡು ಓದುಗರಿಗೆ ಮನಸಿಗೆ ತಟ್ಟುತ್ತದೆ ಎನ್ನುತ್ತಾ ರಾಜಸ್ಥಾನ ಮತ್ತು ಗುಜರಾತ್‌ನ ಅನುಭವಗಳನ್ನು ವಿವರಿಸಿ, ನಮ್ಮ ಬರವಣಿಗೆ ನಮಗೇ ಅಚ್ಚರಿ ಮೂಡಿಸುವಂತಿರಬೇಕು ಎಂದು ಹೇಳಿದರು.
ದಿ.ಕಂಪಾ ಸೋಮಶೇಖರರಾವ್ ದತ್ತಿ ದಾನಿಗಳಾದ ಕೀರ್ತಿಶೇಖರ ಕಾಸರಗೋಡು, ದಿ. ದುರದುಂಡೇಶವರ ಸಿದ್ದಯ್ಯ ಮಲ್ಲಾಪುರ ದತ್ತಿ ದಾನಿಗಳಾದ ಸುಮಿತ್ರಾ ಮಲ್ಲಾಪುರ, ದಿ. ಸರಸ್ವತಿಶ್ರೀ ದೇಸಾಯಿ ದತ್ತಿದಾನಿಗಳಾದ ರೇಖಾ ಶ್ರೀನಿವಾಸ, ದಿ.ಮಲ್ಲಪ್ಪ ಮುದುಕಪ್ಪ ಚೌಗಲೆ ದತ್ತಿ ದಾನಿಗಳಾದ ಹೀರಾ ಚೌಗಲೆ ಅವರು ವೇದಿಕೆಯಲ್ಲಿದ್ದರು.
ಸಂಘದ ಸದಸ್ಯೆಯರಿಗಾಗಿ ಕಿರುಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿ ಡಾ. ಭಾರತಿ ಮಠದ ಅತಿಥಿಗಳನ್ನು ಸ್ವಾಗತಿಸಿದರು. ಅನ್ನಪೂರ್ಣ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸುಮಾ ಕಿತ್ತೂರು ಜಾನಪದ ಗೀತೆ ಹಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ