ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಮತ್ತು ಕಾರ್ಯಾಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಮತ್ತು ಸಲೀಂ ಅಹ್ಮದ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಸಮಾವೇಶ ಉದ್ಘಾಟಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ಕೆ.ಸಿ.ವೇಣುಗೋಪಾಲ, ಕಾಂಗ್ರೆಸ್ ನ ಹಲವು ನಾಯಕರಿಗೆ ಚಾಟಿ ಏಟು ಬೀಸಿದರು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಡಿ.ಕೆ.ಶಿವಕುಮಾರ ಒಬ್ಬ ನಿಷ್ಠಾವಂತ ಮತ್ತು ಪರಶ್ರಮಿ ಕೆಲಸಗಾರ ಎಂದು ಬಣ್ಣಿಸಿದರು.
ಇದೇ ವೇಳೆ ಸತೀಶ್ ಜಾರಕಿಹೊಳಿ ಅವರನ್ನು ಉದ್ದೇಶಿಸಿ ಮಾತನಾಡಿದ ವೇಣುಗೋಪಾಲ, ನೀವು ಎಲ್ಲ ಕಡೆ ಪ್ರವಾಸ ಮಾಡಬೇಕು. ಬೆಳಗಾವಿಯಲ್ಲೇ ಕುಳಿತುಕೊಳ್ಳಬೇಡಿ. ಬೆಳಗಾವಿಯಲ್ಲಷ್ಟೇ ರಾಜಕಾರಣ ಮಾಡಬೇಡಿ. ಬೆಳಗಾವಿ ರಾಜಕಾರಣ ಎಲ್ಲರಿಗೂ ಗೊತ್ತಿದೆ. ತಿರುಗಾಡಿ ಪಕ್ಷ ಸಂಘಟಿಸುವ ಕೆಲಸ ಮಾಡಿ ಎಂದು ಕಾಲೆಳೆದರು.
ಡಿ.ಕೆ.ಶಿವಕುಮಾರ, ನಾನು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಲು ವಿಧಾನಸೌಧದ ಮೆಟ್ಟಿಲಿನ ಚಪ್ಪಡಿಯಾಗಲು ಸಿದ್ದ. ಎಲ್ಲರೂ ನನಗೆ ಸಹಕಾರ ನೀಡಬೇಕು. ನನಗೆ ಹಿಂಬಾಲಕರು ಬೇಡ. ಕೆಲಸ ಮಾಡುವವರು ಬೇಕು ಎಂದರು.
ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಕಾಂಗ್ರೆಸ್ಸಿಗಾಗಲಿ ಬೇರೆ ಯಾರಿಗೇ ಆಗಲಿ ಅನ್ಯಾಯ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಳಗಾವಿಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ