ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾಯಕನನ್ನು ಇಡಿ ಬಂಧಿಸಿದ್ದು, ನಾಗೇಂದ್ರ ಅವರನ್ನೂ ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಾಲ್ಮೀಕಿ ನಿಗಮದ ಹಗರಣವನ್ನು ಎಸ್ಐಟಿ ತನಿಖೆಗೆ ವಹಿಸಲಾಗಿತ್ತು. ಆದರೆ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಸಹ ತನಿಖೆ ಕೈಗೊಂಡಿದೆ. ಇದೀಗ ಜಾರಿ ನಿರ್ದೇಶನಾಲಯ -ಇಡಿ ಸಹ ಎಂಟ್ರಿ ಕೊಟ್ಟಿದೆ. ಬುಧವಾರ ಬೆಳಗ್ಗೆಯೇ ಇಡಿ ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ಗೆ ಸಂಬಂಧಿಸಿ 18 ಕಡೆಗಳಲ್ಲಿ ದಾಳಿ ನಡೆಸಿದೆ.
ಇಡಿ ಈಗಾಗಲೆ ನಾಗೇಂದ್ರ ಪಿಎ ಹರೀಶ್ ಎನ್ನುವವನನ್ನು ಬಂಧಿಸಿದೆ. ಆತನನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಇಡಿ ಯಾವುದೇ ಕ್ಷಣದಲ್ಲಿ ನಾಗೇಂದ್ರ ಅವರನ್ನೂ ಬಂಧಿಸಬಹುದು ಎನ್ನುವ ಮಾತಿ ಕೇಳಿ ಬರುತ್ತಿದೆ. ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಇಬ್ಬರು ಅಧಿಕಾರಿಗಳು ಮಾತನಾಡುವ ಆಡಿಯೋ ಹೊರಬಿದ್ದ ನಂತರ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
187 ಕೋಟಿ ರೂ.ಗಳನ್ನು ಹೈದರಾಬಾದ್ ನ ಬೇರೆ ಬೇರೆ ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ವರ್ಗಾವಣೆ ಮಾಡಿ ಹಣ ಪಡೆದ ಈ ಪ್ರಕರಣ ಚಂದ್ರಶೇಖರ ಎನ್ನುವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ನಂತರ ಬೆಳಕಿಗೆ ಬಂದಿದೆ.
ಈ ಹಗರಣದಲ್ಲಿ ಮೂವರು ಸಚಿವರು ಭಾಗಿಯಾಗಿದ್ದಾರೆ ಎನ್ನುವ ಆರೋಪವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾಡಿದ್ದಾರೆ. ಈಗ ಎಸ್ಐಟಿ, ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ