*ಮಾಜಿ ಸಚಿವ ಡಿ.ಬಿ. ಚಂದ್ರೇಗೌಡರ ನಿಧನಕ್ಕೆ ಕಂಬನಿ ಮಿಡಿದ ಡಿಸಿಎಂ ಡಿ.ಕೆ.ಶಿವಕುಮಾರ್ *
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ, ಮಾಜಿ ಸಂಸದ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಡಿ.ಬಿ. ಚಂದ್ರೇಗೌಡರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ಆಪ್ತವಲಯದಲ್ಲಿ ಡಿಬಿಸಿ ಎಂದೇ ಪ್ರಸಿದ್ದರಾಗಿದ್ದ ಡಿ.ಬಿ. ಚಂದ್ರೇಗೌಡರನ್ನು ಕಳೆದು ಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಅವರ ನಿಧನದಿಂದ ಮಲೆನಾಡಿನ ಭಾಗದಿಂದ ಬಂದಂತಹ ಸಮಾಜವಾದದ ಗಟ್ಟಿಕೊಂಡಿ, ನಿರ್ಮಲ ಮನಸ್ಸಿನ ವ್ಯಕ್ತಿತ್ವವೊಂದು ಕಳಚಿಬಿದ್ದಂತಾಗಿದೆ.
ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾ ಗಾಂಧಿ ಅವರು ಸಂಕಷ್ಟದಲ್ಲಿದ್ದ ವೇಳೆ 1978 ರಲ್ಲಿ ಚಂದ್ರೆಗೌಡರು ತಮ್ಮ ಸಂಸತ್ ಸದಸ್ಯ ಸ್ಥಾನವನ್ನು ಬಿಟ್ಟುಕೊಟ್ಟು, ಇಂದಿರಾಗಾಂಧಿ ಅವರ ಗೆಲುವಿಗೆ ಹಗಲು- ರಾತ್ರಿ ದುಡಿದು ಇಡೀ ದೇಶದ ಗಮನ ಸೆಳೆದಿದ್ದರು.
ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿ, ವಿಧಾನಸಭೆಯ ಸ್ಪೀಕರ್ ಆಗಿ, ರಾಜ್ಯಸಭೆಯ ಸದಸ್ಯರಾಗಿದ್ದರು. ವಿಧಾನ ಮಂಡಲ ಹಾಗೂ ಸಂಸತ್ತಿನ ಎಲ್ಲ ನಾಲ್ಕೂ ಸದನಗಳ ಸದಸ್ಯರಾಗಿದ್ದ ಹೆಗ್ಗಳಿಕೆ ಇವರದು.
ಸುಮಾರು ಐದು ದಶಕಗಳ ಕಾಲ ಈ ರಾಜ್ಯಕ್ಕೆ ತಮ್ಮ ಸಮಾಜವಾದಿ ಚಿಂತನೆಗಳ ಮೂಲಕ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದವರು ಚಂದ್ರೇಗೌಡರು ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.
ಚಂದ್ರೇಗೌಡರ ಆಡಳಿತ ವೈಖರಿಯನ್ನು ಹತ್ತಿರದಿಂದ ನೋಡಿದ ಸೌಭಾಗ್ಯ ನನ್ನದು. ವಿಧಾನಸಭೆ, ಪರಿಷತ್‌ಗಳಲ್ಲಿ ಅವರ ಆಳವಾದ, ವಿದ್ವತ್ ಪೂರ್ಣವಾದ ವಿಚಾರ ಮಂಡನೆ ಎಲ್ಲರನ್ನೂ ಸೆಳೆಯುತ್ತಿತ್ತು. ಆಡಳಿತ ಪರಿಶುದ್ದತೆ, ವೈಚಾರಿಕ, ಜನಪರ ಚಿಂತನೆಗಳಿಗೆ ಹೆಸರಾಗಿದ್ದ ಅವರು ಕಿರಿಯ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದು ಶಿವಕುಮಾರ್ ಅವರು ಕೊಂಡಾಡಿದ್ದಾರೆ.
“ಶರಣರ ಗುಣವನ್ನು ಮರಣದ ಲ್ಲಿ ಕಾಣು ಎಂಬಂತೆ, ಚಂದ್ರೇಗೌಡರು ಕನ್ನಡ, ಕರ್ನಾಟಕ ಅಭಿವೃದ್ಧಿಗೆ ದಾರಿ ಹಾಕಿಕೊಟ್ಟು ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬದವರು, ಬಂದುಗಳು, ಅಭಿಮಾನಿಗಳಿಗೆ ಅವರ ಸಾವಿನ ನೋವು ಅರಗಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ.” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ