
ಪ್ರಗತಿವಾಹಿನಿ ಸುದ್ದಿ: ಪಕ್ಕದ ಮನೆಯವರೊಂದಿಗೆ ಜಗಳದೊಂದಿಗೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಟೆಕ್ ಮಹೀಂದ್ರಾದ ಮಾಜಿ ಉದ್ಯೋಗಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಪರಮಜೀತ್ ಧಂಕರ್ ಕೊಲೆಯಾದ ವ್ಯಕ್ತಿ. ಅದೇ ಕಟ್ಟಡದಲ್ಲಿ ವಾಸವಾಗಿದ್ದ ವ್ಯಕ್ತಿ ಪರಮಜಿತ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹತ್ಯೆ ಮಾಡಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಣ್ಣ ಜಗಳ ಒಂದು ಸಾವಿಗೆ ಕಾರಣವಾಗಿರುವ ಘಟನೆ ಹರಿಯಾಣದ ಫರೀದಾಬಾದ್ನಲ್ಲಿ ನಡೆದಿದೆ. ನವೆಂಬರ್ 6ರಂದು ಧಂತೇರಸ್ ಹಬ್ಬದ ದಿನ ಸಂಜೆ ಫರೀದಾಬಾದ್ನ ಸೆಕ್ಟರ್ 21ಸಿಯಲ್ಲಿ ಈ ಘಟನೆ ನಡೆದಿದೆ.
ಮೃತ ಪರಮಜೀತ್ ಧಂಕರ್ ಸಿಂಗಾಪುರದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಸಂಬಂಧಿಕರ ಮನೆಯ ಮದುವೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದರು. ಅವರು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಮೋನು ಶರ್ಮಾ ಕೂಡ ವಾಸವಿದ್ದ.
ಪಾರ್ಕಿಂಗ್ ಸೇರಿದಂತೆ ಹಲವು ಸಣ್ಣಪುಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನವೆಂಬರ್ 6ರಂದು ಇದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ವೇಳೆ ಮೋನು ಶರ್ಮಾ, ಮಾತನಾಡುವ ನೆಪದಲ್ಲಿ ಪರಮಜೀತ್ ಅವರನ್ನು ಮನೆಯ ಹೊರಗೆ ಕರೆದಿದ್ದಾನೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ಆರೋಪಿ ಪರಮಜೀತ್ ಅವರನ್ನು ಪ್ರಶ್ನಿಸುತ್ತಾ ವಾಗ್ವಾದ ನಡೆಸಿದ್ದಾನೆ. ಪರಮಜೀತ್ ಅವರಿಗೆ ವಿಚಾರವೇನು ಎಂಬುದು ಅರ್ಥವಾಗದೆ, ಕೈಮುಗಿದು ವಿವರಣೆ ಕೇಳಿದರೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಮೋನು ಶರ್ಮಾ ತನ್ನ ಜೇಬಿನಿಂದ ಪಿಸ್ತೂಲ್ ತೆಗೆದು ಪರಮಜೀತ್ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದಾನೆ. ಕೆಲವೇ ಸೆಕೆಂಡ್ಗಳಲ್ಲಿ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಪರಮಜೀತ್ ಕಟ್ಟಡದ ಹೊರಗೆ ಓಡಿದ್ದಾರೆ. ಆದರೂ ಆರೋಪಿ ಅವರನ್ನು ಬೆನ್ನಟ್ಟಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಪರಮಜೀತ್, ಆರೋಪಿಯನ್ನು ತಡೆಯಲು ಆತನ ಅಂಗಿಯ ಕಾಲರ್ ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮತ್ತೆ ಕೈಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಪಿ ತನ್ನ ಪಿಸ್ತೂಲ್ಗೆ ಮತ್ತೆ ಗುಂಡು ತುಂಬಿಕೊಂಡು ಬಂದು ಪರಮಜೀತ್ ಮೇಲೆ ಮತ್ತಷ್ಟು ಗುಂಡು ಹಾರಿಸಿದ್ದಾನೆ. ಈ ವೇಳೆ, “ದೀಪಾವಳಿ ಶುಭಾಶಯಗಳು, ಎಲ್ಲರನ್ನೂ ಮುಗಿಸುತ್ತೇನೆ” ಎಂದು ಕೂಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕೇಳಿಬಂದಿದೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಪರಮಜೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಮೋನು ಶರ್ಮಾನನ್ನು ಬಂಧಿಸಿದ್ದಾರೆ.



