*BREAKING: ಬೆಳಗಾವಿಯಲ್ಲಿ ಮತ್ತೊಂದು ಘಟನೆ: ಪತ್ನಿಯನ್ನು ಬರ್ಬರವಾಗಿ ಕೊಂದು ಆತ್ಮಹತ್ಯೆಗೆ ಶರಣಾದ ಪತಿ*

ಪ್ರಗತಿವಾಹಿನಿ ಸುದ್ದಿ: ಕುಂದಾನಗರಿ ಬೆಳಗಾವಿಯಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಪತಿ ಮಹಾಶಯನೊಬ್ಬ ಪತ್ನಿಯನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದು, ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಯಿ ಮೃತಪಟ್ಟಿದ್ದಕ್ಕೆ ಪತ್ನಿ ತವರಿಗೆ ಹೋಗಲು ಮುಂದಾಗಿದ್ದಕ್ಕೆ ಮನುಷತ್ವವನ್ನೂ ಮರೆತ ಪತಿ ಪತ್ನಿಯನ್ನೇ ಕೊಡಲಿಯಿಂದ ಕಡಿದು ಸಾಯಿಸಿದ್ದಾನೆ.
ಯಲ್ಲವ್ವ (40) ಪತಿಯಿಂದ ಕೊಲೆಯಾದ ಮಹಿಳೆ. ಶಿವಪ್ಪ ಸಣ್ಣಬಸಪ್ಪ ಕಂಬಳಿ (46) ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ. ಯಲ್ಲವ್ವಳಿಗೆ ತಾಯಿ ಸಾವನ್ನಪ್ಪಿ ಒಂದು ವಾರವಾಗಿತ್ತು. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಬೇಕಿದ್ದ ಕಾರಣಕ್ಕೆ ತವರಿಗೆ ಹೋಗಲು ಸಿದ್ಧತೆ ನಡೆಸಿದ್ದರು. ಆದರೆ ಪತಿ ಶಿವಪ್ಪ, ತವರಿಗೆ ಹೋಗುವುದು ಬೇಡವೆಂದು ತಾಕೀತು ಮಾಡಿದ್ದಾನೆ. ತಾಯಿ ಮೃತಪಟ್ಟ ಸಂದರ್ಭದಲ್ಲಿ ವಿಧಿ-ವಿಧಾನಗಳಿಗೆ ತವರಿಗೆ ಹೋಗುವುದು ಬೇಡ ಎನ್ನುವುದು ಸರಿಯಲ್ಲ ಎಂದು ಪತ್ನಿ ಏರುದ್ವನಿಯಲ್ಲಿ ಮಾತನಾಡಿದ್ದಾಳೆ ಅಷ್ಟೇ. ಇಷ್ಟಕ್ಕೆ ಕೊಡಲಿಯನ್ನು ತೆಗೆದುಕೊಂಡು ಬಂದ ಪತಿ ಯಲ್ಲವ್ವಳ ಕತ್ತು ಹಾಗೂ ಬೆನ್ನಿಗೆ ಹೊಡೆದಿದ್ದಾನೆ. ಸ್ಥಳದಲ್ಲೇ ಯಲ್ಲವ್ವ ಸಾವನ್ನಪ್ಪಿದ್ದಾರೆ.
ಪತ್ನಿ ಸಾವನ್ನಪ್ಪುತ್ತಿದ್ದಂತೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

