*ಮಕ್ಕಳ ಮಾರಾಟ ಪ್ರಕರಣದಲ್ಲಿ ಸ್ಫೋಟಕ ತಿರುವು: ವಿಶೇಷ ತಂಡ ರಚಿಸಿದ ಬೆಳಗಾವಿ ಡಿಸಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಮಕ್ಕಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಂಪಿ ವೈದ್ಯ ಸೇರಿ ಐದು ಜನರನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಮದುವೆಗೂ ಮುನ್ನ ಗರ್ಭಿಣಿಯಾಗಿ ಅಬಾರ್ಷನ್ ಮಾಡಿಸಬೇಕು ಅನ್ನೋರನ್ನೇ ಟಾರ್ಗೆಟ್ ಮಾಡುತ್ತಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹಾಗಾಗಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ತನಿಖೆಗೆ ವಿಶೇಷ ತಂಡ ರಚಿಸಿದ್ದಾರೆ.
ಆರೋಪಿಗಳು ಏಳು, ಎಂಟು ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೆ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಸದ್ಯ ಪೊಲೀಸರು ಈ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಪ್ರಕರಣದ ಕಿಂಗ್ ಪಿನ್ ಅಬ್ದುಲ್ ಗಫಾರ್ ಲಾಡಖಾನ್ ತೋಟದ ಮನೆಗೆ ತೀವ್ರ ನಿಗಾ ಇಟ್ಟಿದ್ದಾರೆ. ಆರೋಪಿಗೆ ಸೇರಿದ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿರುವ ಫಾರ್ಮ್ಹೌಸ್ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅನಧಿಕೃತ ಕ್ಲಿನಿಕ್ ಹೊಂದಿರುವ ಹಾಗೂ ಮಕ್ಕಳ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಅಬ್ದುಲ್ ಮಾಲೀಕತ್ವದ ತೋಟದ ಮನೆ ಇದಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಕ್ಲಿನಿಕ್ ಸೀಜ್ ಮಾಡಿದ್ದರು. ಮಕ್ಕಳ ಮಾರಾಟ ಮತ್ತು ಭ್ರೂಣ ಹತ್ಯೆಯಲ್ಲೂ ಆತನ ಪಾತ್ರ ಇರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಲಾಡಖಾನ್ಗೆ ಸೇರಿದ ತೋಟದ ಮನೆಯಲ್ಲಿ ಭ್ರೂಣ ಹತ್ಯೆ, ಅಕ್ರಮ ಚಟುವಟಿಕೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ತೋಟದ ಮನೆ ಸುತ್ತಮುತ್ತ ಸಿರಿಂಜ್ ಕವರ್, ವೈದ್ಯಕೀಯ ಪರಿಕರಗಳು ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಸಾಕ್ಷಿ ನಾಶ ಆಗಬಾರದೆಂದು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ತೋಟದ ಮನೆಗೆ ಭದ್ರತೆ ಒದಗಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ