ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತಾನೊಬ್ಬ ಮಿಲ್ಟ್ರಿ ಆಫೀಸರ್. ನಿಮಗೆ ಪೆನ್ಶನ್ ಕೊಡಿಸುತ್ತೇನೆ. ನೌಕರಿ ಕೊಡಿಸುತ್ತೇನೆ ಎಂದೆಲ್ಲ ನಂಬಿಸಿ ಹಣ ವಸೂಲಿ ಮಾಡಿದ್ದಲ್ಲದೆ, ಐವರು ಯುವತಿಯರನ್ನು ಮದುವೆಯಾದ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಡಿಸಿಪಿ ವಿಕ್ರಂ ಅಮಟೆ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತದೆ. ವಿಶೇಷ ತಂಡ ರಚಿಸಿರುವ ಅಮಟೆ ತನಿಖೆಯನ್ನು ಮಂದುವರಿಸಿದ್ದಾರೆ.
ಮುದ್ದೆಬಿಹಾಳ ತಾಲೂಕಿನ ನಾಲತವಾಡದ ಮಂಜುನಾಥ ಬಿರಾದಾರ (37) ಈ ಮಕ್ಮಲ್ ಟೋಪಿ ಹಾಕುತ್ತದ್ದವ.
ಸೈನಿಕರು ಮೃತರಾದ ಸುದ್ದಿ ತಿಳಿದ ಕೂಡಲೇ ಅವರ ಮನೆಗಳಿಗೆ ತೆರಳಿ ತಾನೊಬ್ಬ ಮಿಲ್ಟ್ರಿ ಆಫೀಸರ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಯೋಧರಿಗೊಂದು ನಮನ ಎನ್ನುವ ಕಾರ್ಯಕ್ರಮ ಮಾಡುವುದಲ್ಲದೆ, ಮೃತ ಸೈನಿಕರ ಪತ್ನಿಯರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ನಂಬಿಸುತ್ತಾನೆ.
ನಂತರ ಅವರಿಂದ ಹಣ ಪಡೆಯುವುದಲ್ಲದೆ, ತನಗೆ ತಂದೆ, ತಾಯಿ ಯಾರೂ ಇಲ್ಲ ಎಂದು ಹೇಳಿ ವಿವಾಹವನ್ನೂ ಆಗುತ್ತಾನೆ. ಒಂದು ತಿಂಗಳು ಅವರೊಂದಿಗಿದ್ದು ನಂತರ ನಾಪತ್ತೆಯಾಗುತ್ತಾನೆ. ಹೀಗೆ ಒಟ್ಟೂ 5 ಮದುವೆಯಾಗಿರುವ ವಿಷಯ ಈವರೆಗಿನ ತನಿಖೆಯಿಂದ ಗೊತ್ತಾಗಿದೆ.
ಈತನ ವಿರುದ್ಧ ಈಗಾಗಲೆ ಸುರತ್ಕಲ್, ಇಂಡಿ, ರಾಯಚೂರು, ವಿಜಯಪುರಗಳಲ್ಲಿ ಪ್ರಕರಣ ದಾಖಲಾಗಿದೆ. ಈತನನ್ನು ಬಂಧಿಸಿರುವ ವಿಷಯ ತಿಳಿಯುತ್ತಿದ್ದಂತೆ ಮೋಸಹೋದ ಇನ್ನೂ ಅನೇಕರು ಠಾಣೆಯನ್ನು ಸಂಪರ್ಕಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ