*ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸುಳ್ಳು ಸುದ್ದಿಗಳ ಹಾವಳಿ ಮಿತಿ ಮೀರಿದ್ದು, ಇಂತಹ ನ್ಯೂಸ್‌ಗಳ ಮೂಲಗಳನ್ನು ಪತ್ತೆ ಹಚ್ಚಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುತ್ತಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ತಮ್ಮನ್ನು ಭೇಟಿ ಮಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರ ಜತೆಗೂ ಈ ಬಗ್ಗೆ ಮುಖ್ಯಮಂತ್ರಿಗಳು ವಿವರವಾಗಿ ಚರ್ಚಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಫೇಕ್ ನ್ಯೂಸ್‌ಗಳ ಹಾವಳಿ ಹೆಚ್ಚಾಗಿತ್ತು. ಈ ಬಾರಿ ಕೂಡ ಅದೇ ತಂತ್ರವನ್ನು ರಾಜಕೀಯ ವಿರೋಧಿಗಳು ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮಾಮೂಲಿಯಂತೆ ಫೇಕ್ ನ್ಯೂಸ್‌ಗಳನ್ನು ಹೆಚ್ಚೆಚ್ಚು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಆರಂಭದಲ್ಲೇ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಬೇರು ಸಮೇತ ಕತ್ತರಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸೂಚಿಸಿದ್ದಾರೆ.
ಮಕ್ಕಳ ಕಳ್ಳರು, ಗೋಮಾಂಸ ಸಾಗಿಸುವವರು…ಇತ್ಯಾದಿ ಸುಳ್ಳು ಸುದ್ದಿಗಳನ್ನು ಹರಡಿಸಿ ಕಳೆದ ಬಾರಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಈ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಮತ್ತು ಸಂಘ ಪರಿವಾರವನ್ನು ಸ್ಪಷ್ಟವಾಗಿ ಮತ್ತು ಅಷ್ಟೆ ನಿಷ್ಠುರವಾಗಿ ತಿರಸ್ಕರಿಸಿದ್ದಾರೆ. ಆದರೆ ದೇಶದ ಪ್ರಜಾಪ್ರಭುತ್ತದ ಉಳಿವಿಗೆ ಅತ್ಯಂತ ಮಹತ್ವದ್ದಾಗಿರುವ 2024ರ ಲೋಕಸಭಾ ಚುನಾವಣೆಗೆ ನಾವು ಸಜ್ಜಗುತ್ತಿರುವ ಹೊತ್ತಿನಲ್ಲಿ ಸುಳ್ಳು ಸುದ್ದಿ, ವದಂತಿಗಳ ಮೂಲಕ ಗುಂಪುಹಲ್ಲೆ, ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯಬಹುದು ಎನ್ನುವ ಸೂಚನೆಗಳೂ ಕಾಣಿಸುತ್ತಿವೆ. ಹೀಗಾಗಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕಮಿಷನರೇಟ್/ ಪ್ರಧಾನ ಕಚೇರಿಯಲ್ಲಿ ನಲ್ಲಿ ಫ್ಯಾಕ್ಟ್ ಚೆಕ್
ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲೇ ಒಂದು ತಾಂತ್ರಿಕ ತಂಡ ಫೇಕ್ ನ್ಯೂಸ್‌ಗಳನ್ನು ಪತ್ತೆ ಹಚ್ಚಿ, ಫ್ಯಾಕ್ಟ್ಚೆಕ್ ಮಾಡಿ ಜನರನ್ನು ಎಚ್ಚರಿಸುವ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಫ್ಯಾಕ್ಟ್ ಚೆಕ್ ಮಾಡುವುದನ್ನು ಬಂದ್ ಮಾಡಿಸಿದೆ. ಇದನ್ನು ಮತ್ತೆ ಆರಂಭಿಸಬೇಕು. ಸೈಬರ್ ಪೊಲೀಸರು ಫೇಕ್ ನ್ಯೂಸ್‌ಗಳ ಮೂಲಗಳನ್ನು ಪತ್ತೆಹಚ್ಚಲು ಸರ್ವಸನ್ನದ್ದವಾಗಿ ಕೆಲಸ ಮಾಡಬೇಕು. ಪ್ರತೀ ತಿಂಗಳು ಈ ಬಗ್ಗೆ ವರದಿಯನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ