*ಭಾರತ ವಿಶ್ವದೆದುರು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ರೈತರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್* *ಕಬ್ಬು ಬೆಳೆ ಕುರಿತ ವಿಚಾರ ಸಂಕಿರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬ್ರಿಟೀಶರು ಬಿಟ್ಟು ಹೋಗುವಾಗ ಅತ್ಯಂತ ಧಯನೀಯ ಸ್ಥಿತಿಯಲ್ಲಿದ್ದ ದೇಶ ಇಂದು ವಿಶ್ವದ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ನಮ್ಮ ರೈತರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಶನಿವಾರ ನ್ಯೂಸ್ ಫರ್ಸ್ಟ್ ಕನ್ನಡ ವಾಹಿನಿ ಆಯೋಜಿಸಿದ್ದ ಕಬ್ಬು ಬೆಳೆಗಾರರ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ಸ್ವತಂತ್ರ್ಯ ಸಿಗುವ ವೇಳೆ ದೇಶದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಬ್ರಿಟೀಶರು ನಮ್ಮದೇಶವನ್ನು, ನಮ್ಮ ಭೂಮಿಯನ್ನು ಹಾಳು ಮಾಡಿ ಹೋಗಿದ್ದರು. ಅಂತಹ ನೆಲದಲ್ಲಿ ಬಿತ್ತಿ, ಬೆಳೆದು ದೇಶವನ್ನು ಇಂದು ಈ ಸ್ಥಿತಿಗೆ ತಂದವರು ನಮ್ಮ ರೈತರು ಎಂದು ಅವರು ಹೇಳಿದರು.
ರೈತರಿಗೆ ವಾರದ ರಜೆ ಇಲ್ಲ. ನಿವೃತ್ತಿ ವೇತನವಿಲ್ಲ. ಸಮಾಜದ ನಿಜವಾದ ಚಿಂತಕರಾಗಿರುವ ಅವರು ತಮ್ಮ ಬೆವರು ಸುರಿಸಿ ದೇಶಕಟ್ಟುವವರು ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದರು.
ನ್ಯೂಸ್ ಫರ್ಸ್ಟ್ ಚಾನೆಲ್ ಸಾಮಾಜಿಕ ಬದ್ಧತೆಯಿಂದ ಇಂತಹ ಅತ್ಯಂತ ಅಗತ್ಯವಾದ ವಿಷಯದ ಕುರಿತು ವಿಚಾರಸಂಕಿರಣ ಆಯೋಜಿಸಿರುವುದಕ್ಕೆ ನಾನು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರಗತಿಪರ ರೈತರನ್ನು ಸೃಷ್ಟಿಸಲು ಇಂತಹ ವೇದಿಕೆ ನೆರವಾಗಲಿದೆ. ಬೆಳಗಾವಿ ಕಬ್ಬು ಬೆಳೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಜಿಲ್ಲೆ, ಹಾಗಾಗಿಯೇ ಜಿಲ್ಲೆಯಲ್ಲಿ 28ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಬ್ಬಿನ ಜೊತೆಗೆ ಉಪಬೆಳೆ ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಲೋಕೋಪಯೋಗಿ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿದರು. ನ್ಯೂಸ್ ಫರ್ಸ್ಟ್ ಸಿಇಒ ಎಸ್.ರವಿಕುಮಾರ, ಗೋದಾವರಿ ಶುಗರ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಬಾಲಚಂದ್ರ ಭಕ್ಷಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೃಷಿ ವಿಜ್ಞಾನಿಗಳು, ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.