ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯವಹಾರಗಳ ಸುಧಾರಣೆ ಕುರಿತಂತೆ ರೈತರ ಬೇಡಿಕೆಗಳನ್ನು ಒಂದು ತಿಂಗಳಲ್ಲಿ ಈಡೇರಿಸುವುದಾಗಿ ಎಪಿಎಂಸಿಯ ಅಧ್ಯಕ್ಷ ಅನಂತ ಪಾಟೀಲ, ಕಾರ್ಯದರ್ಶಿ ಗುರುಪ್ರಸಾದ ಹಾಗೂ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸಗೌಡ ಪಾಟೀಲ ರೈತರಿಗೆ ಲಿಖಿತ ಭರವಸೆ ನೀಡಿದ್ದಾರೆ.
ಎಪಿಎಂಸಿಗಳಲ್ಲಿ ನಡೆಯುತ್ತಿರುವ ರೈತರ ಆರ್ಥಿಕ ಶೋಷಣೆಯನ್ನು ತಡೆಗಟ್ಟುವ ಮೂಲಕ ಪಾರದರ್ಶಕ ಆಡಳಿತ ಜಾರಿಗೆ ತರುವಂತೆ ಆಗ್ರಹಿಸಿ ಎಪಿಎಂಸಿ ವಿರುದ್ಧ ಬುಧವಾರ ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ಅಧ್ಯಕ್ಷ ಸಿದಗೌಡ ಮೋದಗಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೀಕರ ಅವರ ಮುಂದಾಳತ್ವದಲ್ಲಿ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರಿಗೆ ಈ ಭರವಸೆ ನೀಡಿದರು.
ರೈತರ ಸ್ವಾಭಿಮಾನದ ಬದುಕಿಗಾಗಿ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಆರ್ಥಿಕ ಶೋಷಣೆ ನಿಲ್ಲಬೇಕಾಗಿದೆ. ಎಪಿಎಂಸಿಗಳಲ್ಲಿ ಈಗಿರುವ ಬಿಳಿ ಚೀಟಿ ಪದ್ದತಿಯನ್ನು ರದ್ದು ಪಡಿಸಬೇಕು. ಅಧಿಕೃತ ವ್ಯಾಪಾರಿಗಳು ಅಧಿಕೃತ ರಸೀದಿಗಳನ್ನು ನೀಡಬೇಕು. ರೈತರ ಸಮ್ಮುಖದಲ್ಲಿಯೇ ಧಾರಣೆ ನಿರ್ಧರಿಸಬೇಕು.
ನಕಲಿ ಕಂಪನಿಗಳ ಹಾವಳಿ ತಡೆಯಬೇಕು. ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು. ರೈತರಿಂದ ಕಮಿಷನ್ ಪಡೆಯುವುದನ್ನು ನಿಲ್ಲಿಸಬೇಕು. ಪಾರದರ್ಶಕ ಆಡಳಿತ ಜಾರಿಗೆ ತರಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಹಾಗೂ ಜಾನುವಾರುಗಳಿಗೆ ನೆರಳು, ನೀರು, ಮೇವು ಒದಗಿಸಬೇಕು ಎಂದು ಆಗ್ರಹಿಸಿ, ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಎಪಿಎಂಸಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಕಚೇರಿಯ ಮುಂದೆ ಧರಣಿ ನಡೆಸುತ್ತಿದ್ದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು, ಈಗಾಗಲೇ ಮಾರುಕಟ್ಟೆಯ ಅಭಿವೃದ್ದಿ ಮತ್ತು ಆಡಳಿತ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಜರುಗಿಸಲಾಗಿದೆ. ಕೇಂದ್ರ ಸರಕಾರದಿಂದ ೧೫ ಕೋಟಿ ರೂ. ಅನುದಾನ ಬಂದಿದೆ. ಶೀಘ್ರದಲ್ಲಿಯೇ ಕಾಮಗಾರಿಗಳು ಆರಂಭವಾಗಲಿವೆ. ರೈತ ಭವನ ನವೀಕರಣಕ್ಕೂ ಅನುದಾನ ಬಂದಿದೆ. ಈ ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಕೊಲ್ಹಾಪೂರ ತರಕಾರಿ ಮಾರುಕಟ್ಟೆಯಲ್ಲಿರುವ ತರಕಾರಿಗಳ ಹರಾಜು ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ರೈತರಿಂದ ಕಮಿಷನ್ ಪಡೆಯುವುದನ್ನು ನಿಲ್ಲಿಸಲಾಗುವುದು. ಕಮಿಷನ್ ಏಜೆಂಟರ ಹಾವಳಿ ಹಾಗೂ ಇತರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಿದಗೌಡ ಮೋದಗಿ ಮಾತನಾಡಿ, ರೈತರ ಬೇಡಿಕೆಗಳು ಹಾಗೂ ಮಾರುಕಟ್ಟೆಯ ಸಮಸ್ಯೆಗಳನ್ನು ಮನವರಿಕೆ ಮಾಡಿದರು. ಅನೇಕ ರೈತ ಮುಖಂಡರುಗಳು ಮಾತನಾಡಿದರು.
ಜಯಪ್ಪ ಬಸರಕೋಡ, ಆರ್.ಎಸ್.ದರ್ಗೆ, ಶಿವಾನಂದ ಕರೀಗಾರ, ದುಂಡಪ್ಪ ಪೂಜಾರಿ, ಎಂ.ಎಂ.ರಾಜೀಭಾಯಿ, ಶ್ರೀಕಾಂತ ಶಿರಹಟ್ಟಿ, ಕೆಂಪಣ್ಣ ಮಾಸ್ತಿಹೋಳಿ, ರಮೇಶ ಲಂಗೋಟಿ, ಮೀರಾ ಬೀರನ್ನವರ, ಶಕುಂತಲಾ ತೇಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ