*ಬೆಳಗಾವಿಯಲ್ಲಿ ಮತ್ತೊಂದು ಘೋರ ಘಟನೆ: ಸಾಲ ತೀರಿಸಲು ವಿಳಂಬ ಮಾಡಿದ್ದಕ್ಕೆ ಪತ್ನಿ-ಮಗನನ್ನೇ ಗೃಹ ಬಂಧನದಲ್ಲಿಟ್ಟ ಮಹಿಳೆ; ನೊಂದ ರೈತ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಸಾಲ ಮರುಪಾವತಿಸಲು ವಿಳಂಬ ಮಾಡಿದ್ದಕ್ಕೆ ಸಾಲ ಕೊಟ್ಟ ಮಹಿಳೆ ರೈತನ ಪತ್ನಿ ಹಾಗೂ ಮಗನನ್ನು ಕರೆದೊಯ್ದು ಕೂಡಿ ಹಾಕಿ ಅನ್ನ, ನೀರು ನೀಡದೇ ಹಿಂಸೆ ಮಾಡಿದ್ದಕ್ಕೆ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಇಸ್ಲಾಂಪುರದಲ್ಲಿ ನಡೆದಿದೆ.
ರೈತ ರಾಜು ಎಂಬಾತ ಭೀಕರ ಬರದಿಂದ ಬೆಳೆ ನಷ್ಟವಾಗಿದ್ದರಿಂದ ಬೇರೆ ದಾರಿಕಾಣದೇ ಅದೇ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆ ಬಳಿ ಒಂದುವರೆ ಲಕ್ಷ ರೂಪಾಯಿ ಕೈಸಾಲ ಪಡೆದಿದ್ದ. ಪ್ರತಿ ತಿಂಗಳು ಶೇ.10ರಷ್ಟು ಬಡ್ಡಿಯನ್ನು ಕಟ್ಟುತ್ತಿದ್ದರು. ಆದರೆ ಸಾಲ ಮರುಪಾವತಿಗೆ ಕೊಂಚ ವಿಳಂಬವಾಗಿದೆ. ಇದಕ್ಕೆ ಸಿದ್ದವ್ವ ಹಣ ಪಾವತಿಸುವವರೆಗೂ ಪತ್ನಿ, ಮಗನನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗು ಎಂದಿದ್ದಳು.
ಅಲ್ಲದೇ ರಾಜು ಪತ್ನಿ ಹಾಗೂ ಪುತ್ರನನ್ನು ತನ್ನ ಮನೆಗೆ ಕರೆದೊಯ್ದ ಸಿದ್ದವ್ವ ಮನೆಯಲ್ಲಿ ಅನ್ನ, ನೀರನ್ನೂ ನೀಡದೇ ಗೃಹಬಂಧನದಲ್ಲಿ ಇಟ್ಟಿದ್ದಳು. ಎರಡು ದಿನಗಳ ಕಾಲ ನೀರನ್ನೂ ಕೊಟ್ಟಿಲ್ಲ. ಪತ್ನಿ, ಮಗನನ್ನು ಬಿಡುವಂತೆ ರಾಜು ಕೇಳಿಕೊಂಡರೂ ಬಿಡುಗಡೆ ಮಾಡಿಲ್ಲ. ಪೊಲೀಸರಿಗೆ ದೂರು ನೀಡಲು ಹೋದರೆ ಯಮಕನಮರಡಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳದೇ ವಿಳಂಬ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಅವಮಾನ ತಾಳಲಾರದೇ ರೈತ ರಾಜು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ