
ಪ್ರಗತಿವಾಹಿನಿ ಸುದ್ದಿ: ಪಾಪಿ ತಂದೆಯೊಬ್ಬ ನನಗೆ ನೀನು ಬೇಡ, ಗಂಡು ಮಗ ಬೇಕು ಎಂದು ಹೇಳಿ ಮಗಳು ಭೂಮಿಕಾ (7) ಳನ್ನು ಕಾಲುವೆಗೆ ತಳ್ಳಿದ್ದಾನೆ. ಜೂನ್ 10 ರಂದು ಈ ಘಟನೆ ನಡೆದಿದ್ದು ಪ್ರಕರಣ ಸಂಬಂಧ ಇದೀಗ ಪೊಲೀಸರು ಆರೋಪಿ ತಂದೆ ವಿಜಯ್ ಸೋಲಂಕಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಗುಜರಾತ್ ನಲ್ಲಿ ಈ ಘಟನೆ ನಡೆದಿದೆ. ವಿಜಯ್ ಸೋಲಂಕಿ ಮತ್ತು ಅಂಜನಾ ಸೋಲಂಕಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ವಿಚಿತ್ರವೆಂದರೆ, ತಾಯಿ ಮುಂದೆಯೇ ಆರೋಪಿ ಈ ಕೃತ್ಯ ಎಸಗಿದ್ದಾನೆ. ಕೊಲೆ ಬಳಿಕ ಬೆದರಿಕೆ ಹಾಕಿದ್ದರಿಂದ ಆಕೆ ಘಟನೆ ಬಗ್ಗೆ ಎಲ್ಲೂ ಬಾಯ್ದಿಡದೇ ಮನಸ್ಸಲ್ಲೇ ಕೊರಗುತ್ತಿಳು. ಆದರೆ ಹೆಚ್ಚು ದಿನ ಸತ್ಯ ಮರೆ ಮಾಡಲು ಸಾಧ್ಯವಾಗದ ಕಾರಣ ಪೊಲೀಸರಿಗೆ ತಿಳಿಸಿದ್ದಾಳೆ.
ವಿಜಯ್ ಸೋಲಂಕಿ ಪತ್ನಿ ಮತ್ತು ಹಿರಿಯ ಮಗಳು ಭೂಮಿಕಾ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದನು. ಇದೇ ಸಮಯದಲ್ಲಿ ಅಂಜನಾ ತನ್ನ ತವರು ಮನೆಗೆ ಹೋಗಬೇಕು ಎಂದು ಹೇಳಿದ್ದಾಳೆ. ಇದಕ್ಕೆ ಪತಿ ಸೋಲಂಕಿ ಒಪ್ಪಿಲ್ಲ. ಹೀಗಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಸೋಲಂಕಿ, ಮಾರ್ಗ ಮಧ್ಯೆ ಇರುವ ನರ್ಮದಾ ಕಾಲುವೆ ಬಳಿ ಬೈಕ್ ನಿಲ್ಲಿಸಿದ್ದಾನೆ.
ಬಳಿಕ ನನಗೆ ಗಂಡು ಮಗು ಬೇಕಿತ್ತು. ಆದರೆ ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿ ಏಳು ವರ್ಷದ ಮಗಳು ಭೂಮಿಕಾಳನ್ನು ತುಂಬಿ ಹರಿಯುತ್ತಿದ್ದ ಕಾಲುವೆಗೆ ತಳ್ಳಿದ್ದಾನೆ. ಇತ್ತ ಪೊಲೀಸರ ಮುಂದೆ ದಂಪತಿ, ಕಾಲುವೆಯಲ್ಲಿ ಮಗಳು ಮೀನು ನೋಡಲು ಹೋದಾಗ ಆಯತಪ್ಪಿ ಬಿದ್ದಿದ್ದಾಳೆ ಎಂದು ಹೇಳಿಕೆ ದಾಖಲಿಸಿದ್ದರು. ಪೊಲೀಸರು ಇದನ್ನು ಸತ್ಯ ಎಂದು ನಂಬಿದ್ದರು.
ಮಗಳ ಕೊಲೆ ಬಳಿಕ ವಿಜಯ್ ಸೋಲಂಕಿ, ಸತ್ಯ ಹೇಳಿದ್ರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದನು. ಇದರಿಂದ ಅಂಜನಾ ಸತ್ಯ ಹೇಳದೇ ಸುಮ್ಮನಿದ್ದಳು. ಇದೀಗ ತಿಂಗಳ ಬಳಿಕ ಮಗಳು ಭೂಮಿಕಾ ಸಾವಿನ ಸತ್ಯವನ್ನು ಅಂಜನಾ ಹೇಳಿದ್ದಾಳೆ. ಮೀನು ತೋರಿಸುವ ನೆಪದಲ್ಲಿ ಕಾಲುವೆ ಬಳಿ ಕರೆದುಕೊಂಡು ಹೋಗಿ ತಳ್ಳಿ ಕೊಂದನು ಎಂದು ಅಂಜನಾ ಹೇಳಿಕೆ ನೀಡಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.