
ಪ್ರಗತಿವಾಹಿನಿ ಸುದ್ದಿ: ಮಗನಿಗೆ ಬುದ್ಧಿ ಹೇಳಿ, ತಿದ್ದಿ ತೀಡಬೇಕಾದ ಅಪ್ಪನೇ ಎಂತಹ ಕೆಲಸ ಮಾಡಿದ್ದಾನೆ ನೋಡಿ. ಕುಡಿದು ಬಂದ ಅಪ್ಪ, ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರದೀಪ್ ಆಚಾರ್ (29) ಅಪ್ಪನಿಂದಲೇ ಕೊಲೆಯಾದ ಮಗ. ರಮೇಶ್ ಆಚಾರ್ ಮಗನನ್ನೇ ಕೊಲೆಗೈದ ಅಪ್ಪ.
ಅಪ್ಪ ಮಗನ ನಡುವೆ ಆಗಾಗ ಗಲಾಟೆ, ಜಗಳವಾಗುತ್ತಲೇ ಇತ್ತು. ತಂದೆ-ಮಗನ ಕಾಟಕ್ಕೆ ಬೇಸತ್ತು ತಾಯಿ ಮನೆ ಬಿಟ್ಟು ಹೋಗಿದ್ದರು. ಮನೆಯಲ್ಲಿ ತಂದೆ ಹಾಗೂ ಮಗ ಇಬ್ಬರೇ ವಾಸವಾಗಿದ್ದರು. ಕುಡಿತದ ದಾಸನಾಗಿದ್ದ ತಂದೆ, ಮನೆಗೆ ಬಂದು ಗಲಾಟೆ ಮಾಡುತ್ತಲೇ ಇದ್ದ. ನಿನ್ನೆ ರಾತ್ರಿ ಕೂಡ ಅಪ್ಪ-ಮಗನ ನಡುವೆ ಜಗಳಾವಾಗಿದೆ. ಕುಡಿದ ಅಮಲಿನಲ್ಲಿ ಅಪ್ಪ, ಮಗನನ್ನೇ ಮಾರಣಾಂತಿಕವಾಗಿ ಹೊಡೆದಿದ್ದಾನೆ. ಮಗ ರಕ್ತದ ಮಡುವಲ್ಲಿ ಒದ್ದಾಡುತ್ತಿದ್ದರೂ ರಕ್ಷಿಸಿಲ್ಲ, ತಾನು ಗಡದ್ದಾಗಿ ನಿದ್ದೆಗೆ ಜಾರಿದ್ದಾನೆ.
ಬೆಳಗಾಗುವಷ್ಟರಲ್ಲಿ ಮಗ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.ಇಂದು ಬೆಳಿಗ್ಗೆ ಮಗನ ಶವವನ್ನು ಅಪ್ಪ ಮನೆಯಿಂದ ಹೊರಗೆಳೆದು ತರುತ್ತಿರುವುದನ್ನು ಕಂಡು ನೆರೆಮನೆಯವರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಾಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




