ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಟೆಕ್ಯೂಪ ೧.೩ ಪ್ರಾಯೋಜಕತ್ವದಲ್ಲಿ “ಕಂಪ್ಯೂಟೇಶನಲ್ ಮೆಥಡ್ಸ್ ಫಾರ್ ಬಿಗ್ ಡಾಟಾ ಅನಾಲಿಟಿಕ್ಸ್” ಎಂಬ ವಿಷಯದ ಕುರಿತು ಐದು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್ಡಿಪಿ) ಕಾರ್ಯಾಗಾರವನ್ನು ಜನೇವರಿ 6 ರಿಂದ 10 ರವರೆಗೆ ಆಯೋಜಿದೆ.
ಇದರ ಉದ್ಘಾಟನಾ ಸಮಾರಂಭವು ಸೋಮವಾರದಂದು ವಿತಾವಿಯ ಸೆನೆಟ್ ಹಾಲ್ ನಲ್ಲಿ ನಡೆಯಿತು. ಇದನ್ನು ಹುಬ್ಬಳಿಯ ಕೆ ಎಲ್ ಈ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ವಿ ತಾ ವಿ ಶೈಕ್ಷಣಿಕ ಮಂಡಳಿ ಸದಸ್ಯ ಡಾ.ಬಸವರಾಜ್ ಎಸ್. ಅನಾಮಿ ಉದ್ಘಾಟಿಸಿದರು.
ನಂತರ ಮಾತಾಡಿದ ಅವರು ತಾಂತ್ರಿಕವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ “ದತ್ತಾಂಶಗಳ” (ಡೇಟಾ) ಲಭ್ಯತೆಯ ಹಾಗೂ ಬೆಳವಣಿಗೆಯನ್ನು ವಿವರಿಸಿದರು ಮತ್ತು ಈ “ದತ್ತಾಂಶಗಳ” ವಿಶ್ಲೇಷಣೆ ಬಹಳ ಪ್ರಮುಖವಾಗಿದೆ ಎಂದು ಹೇಳಿ ಹೊಸ ಹೊಸ ಗಣಕೀಕೃತ ತಂತ್ರಜ್ಞಾನಗಳ ಬಗ್ಗೆ ಹಾಗೂ ವಿಶ್ಲೇಷಣೆಯ ಹೊಸ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದರು.
ಸಮಾರಂಭದ ಗೌರವ್ ಅತಿಥಿಯಾಗಿದ್ದ ವಿ ತಾ ವಿ ಮೌಲ್ಯಮಾಪನ ಕುಲ ಸಚಿವರಾದ ಡಾ. ಸತೀಶ್ ಅಣ್ಣಿಗೇರಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್ ಮತ್ತು ಬಿಗ್ ಡಾಟಾ ಸಾಧಿಸಿದ ಅಂಶಗಳ ಬಗ್ಗೆ ಮಾತನಾಡುತ್ತ ಇದರಿಂದ ಮುಂಬರುವ ದಿನಗಳಲ್ಲಿ ಖಾಸಿಗತನದ ಗೌಪ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿ ತಾ ವಿ ಕುಲಪತಿಗಳಾದ ಡಾ. ಕರಿಸಿದ್ದಪ್ಪ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿನ ದತ್ತಾಂಶ ವಿಶ್ಲೇಷಣೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಹಾಗೂ ಆ ವಿದ್ಯಾರ್ಥಿಗೆ ಶ್ರೇಷ್ಠ ಭವಿಷ್ಯವನ್ನು ಒದಗಿಸುವಲ್ಲಿ ದತ್ತಾಂಶ ವಿಶ್ಲೇಷಣೆಯನ್ನು ಬಳಸಲು ಅಧ್ಯಾಪಕರನ್ನು ಕೋರಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಕ್ಷರಾದ ಡಾ.ಎಸ್.ಎ.ಅಂಗಡಿ ಸ್ವಾಗತಿಸಿದರು. ಎಫ್ ಡಿ ಪಿ ಸಂಯೋಜಕ ಡಾ.ಮಹಂತೇಶ್ ಎನ್.ಬಿರ್ಜೆ, ಎಫ್ ಡಿ ಪಿ ಯ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಆರ್.ಎಚ್. ಗೌಡರ್ ವಂದಿಸಿದರು. ಪ್ರೊ.ವಿವೇಕಾನಂದರೆಡ್ಡಿ ನಿರೂಪಿಸಿದರು. ಇದರಲ್ಲಿ ಔದ್ಯೋಗಿಕ ಹಾಗೂ ಮತ್ತು ಸರ್ಕಾರಿ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ ವಿ ಟಿ ಯು ಸಂಲಗ್ನತೆ ಹೊಂದಿದ ಕಾಲೇಜ್ ಗಳಿಂದ ಸುಮಾರು 75 ಕ್ಕೂ
ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ