*ಭ್ರೂಣಹತ್ಯೆ ತಡೆಗೆ ಕ್ರಮ: ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಕ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಭ್ರೂಣಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಭ್ರೂಣ ಹತ್ಯೆ ತಡೆಗೆ ಕ್ರಮಗಳನ್ನು ಬಿಗಿಗೊಳಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗಂಡೂರಾವ್ ಹೇಳಿದರು.
ಪರಿಷತ್ತಿನಲ್ಲಿ ಸದಸ್ಯರಾದ ಸಿ.ಟಿ.ರವಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ, ಕೆಲ ಆಸ್ಪತ್ರೆಗಳಲ್ಲಿಯೇ ಗಂಡು ಸಂತಾನವು ಗರಿಷ್ಟ ಪ್ರಮಾಣದಲ್ಲಿ ದಾಖಲಾಗುತ್ತಿರುವುದನ್ನು ಗುಪ್ತಚರ ದಾಳಿಯ ಮೂಲಕ ಕಂಡುಕೊಳ್ಳಲಾಗುತ್ತಿದೆ. ಯಾವ ತಾಲೂಕಿನಲ್ಲಿ ಗಂಡು ಹೆಣ್ಣಿನ ಅನುಪಾತ ಹೆಚ್ಚುತ್ತಿದೆ? ಯಾವ ಆಸ್ಪತ್ರೆಯಲ್ಲಿ ಏನಾಗುತ್ತಿದೆ? ಎನ್ನುವಂತಹ ಅಂಶಗಳ ಮೇಲೆ ಮೇಲ್ವಿಚಾರಣೆ ನಡೆಸಿ, ಅಂತಹ ಜಾಲವನ್ನು ಹತ್ತಿಕ್ಕಲು ಸೂಕ್ತ ಕ್ರಮವಹಿಸುವುದಾಗಿ ಸಚಿವರು ತಿಳಿಸಿದರು.
ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ 2024-25 ನೇ ಸಾಲಿನಲ್ಲಿ ಬಸ್ ಬ್ರ್ಯಾಡಿಂಗ್, ಟ್ರೈನ್ ಬ್ರ್ಯಾಡಿಂಗ್, ರ್ಹೋಡಿಂಗ್ಸ್ ಗೋಡೆ ಬರಹ, ರೇಡಿಯೋ ಜಿಂಗಲ್ಸ್, ಟಿ.ವಿ. ಸ್ಪಾಟ್ಸ್ ಮುಖಾಂತರ ಸಾರ್ವಜನಿಕರಿಗೆ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯ ಕುರಿತು ಅರಿವು ಮೂಡಿಸಲಾಗುತ್ತಿದೆ.
ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಬಗ್ಗೆ ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.




