*ರೈಲ್ವೆ ನಿಲ್ದಾಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸದಿದ್ದರೆ ಉಗ್ರ ಹೋರಾಟ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈಲ್ವೆ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ಮಾಡುವಂತೆ ಆ.14 ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರವಿ ಬಸ್ತವಾಡ್ಕರ್ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ನಗರದಲ್ಲಿ ಕಳೆದ ಎರಡು ವರ್ಷದ ಹಿಂದೆಯೇ ರೈಲ್ವೆ ನಿಲ್ದಾಣದವನ್ನು ನವೀಕರಿಸಲಾಗಿದೆ. ಇಲ್ಲಿ ಎಲ್ಲಾ ಮಹಾನ್ ಪರುಷರ ಪ್ರತಿಮೆಗಳು ಇವೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆ ಇದ್ದರೂ ಅಧಿಕಾರಿಗಳು ಮತ್ತು ಕೇಂದ್ರ ಸರಕಾರದ ನಿರ್ಲಕ್ಷ್ಯದಿಂದ ಪ್ರತಿಮೆ ಸ್ಥಾಪನೆ ಮಾಡಲು ಇಲ್ಲಿಯವರೆಗೂ ಸಾಧ್ಯವಾಗಲಿಲ್ಲ. ಹಲವಾರು ಬಾರಿ ಹೋರಾಟ ಮಾಡಿದರೂ ನಿರ್ಲಕ್ಷ್ಯ ತೋರುತ್ತಿರುವ ರೈಲ್ವೆ ಅಧಿಕಾರಿಗಳ ವಿರುದ್ಧ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ನಮ್ಮ ಈ ಹೋರಾಟಕ್ಕೆ ವಿವಿಧ ಹಿಂದು ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಭಾಗಿಯಾಗಲಿವೆ ಎಂದರು.
ಪಾಲಿಕೆ ಸದಸ್ಯ ಸಿದ್ರಾಯಿ ಮೇತ್ರಿ, ಸವಿತಾ ಅಸೋದಿ, ಸಂತೋಷ ಕಾಂಬಳೆ, ಮನೋಜ ಹಿತಲಮನಿ, ಸಂಗೀತಾ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ