ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯ ಸರಕಾರ ಜಾರಿಗೆ ತಂದಿರುವ ಹೊಸ ಪೆನ್ಶನ್ ಸ್ಕೀಮ್ -ಎನ್ ಪಿ ಎಸ್ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಸಕ್ರೀಯವಾಗಿ ಪಾಲ್ಗೊಳ್ಳಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಸ್.ಎಂ.ಷಡಕ್ಷರಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಪೆನ್ಶನ್ ಸ್ಕೀಂ ರದ್ದುಪಡಿಸಿ ಹಳೆಯ ಸ್ಕೀಂ ನ್ನೇ ಜಾರಿಗೊಳಿಸುವ ಸಂಬಂಧ 10 ತಿಂಗಳ ಹಿಂದೆಯೇ ಸರಕಾರ ಸಮಿತಿ ರಚಿಸಿದೆ. ಆದರೆ ಅದು ಈವರೆಗೂ ಸಭೆ ನಡೆಸಿಲ್ಲ. ಹಾಗಾಗಿ ಮತ್ತೆ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಳದ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಈ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿಲ್ಲ. ಹಾಗಾಗಿ ಮುಂದಿನ ಹೋರಾಟದ ಕುರಿತು ಇಷ್ಟರಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ನೌಕರರಿಗೆ ಕೆಲಸದ ಹೊರೆ ಹೆಚ್ಚಾಗಿದೆ. ತಮಿಳುನಾಡಿಗೆ ಹೋಲಿಸಿದರೆ ನಮ್ಮಲ್ಲಿ ನೌಕರರ ಸಂಖ್ಯೆ ಕಡಿಮೆ ಇದೆ. ಆದರೆ ಅಭಿವೃದ್ಧಿಯಲ್ಲಿ ನಾವು ಮುಂದಿದ್ದೇವೆ. ಸರಕಾರಿ ನೌಕರರಿಗೆ ಸಮರ್ಪಕವಾಗಿ ಆರೋಗ್ಯ ಯೋಜನೆ ಕೂಡ ಇಲ್ಲ. ಈ ಸಂಬಂಧ ಕೂಡ ಹೋರಾಟ ಮಾಡಬೇಕಾಗಿದೆ. ನಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಿ, ಈಡೇರದಿದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಷಡಕ್ಷರಿ ಹೇಳಿದರು.
ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಜಗದೀಶಗೌಡ ಪಾಟೀಲ, ಜಯಕುಮಾರ ಹೆಬಳಿ, ಚಂದ್ರಶೇಖರ ಕೋಲಕಾರ, ಶ್ರೀಕಾಂತ ಯರಗಟ್ಟಿ ಮತ್ತು ಇತರ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.
ಸರಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ