
ಪ್ರಗತಿವಾಹಿನಿ ಸುದ್ದಿ: ತಾಯಿಯ ಪಿಂಚಣಿಯನ್ನು ಹಂಚಿಕೊಳ್ಳುವ ವಿಚಾರವಾಗಿ ಸಹೋದರ ನಡುವೆಯೇ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ
ಗೌರಿಬಿದನೂರು ತಾಲೂಕಿನa ಮೇಳ್ಯ ಗ್ರಾಮದಲ್ಲಿ ತಾಯಿಯ ಪಿಂಚಣಿಯ ಹಣವನ್ನು ಹಂಚಿಕೊಳ್ಳುವ ವಿಚಾರವಾಗಿ ಮೂವರು ಸಹೋದರರ ನಡುವೆ ಗಲಾಟೆಯಾಗಿದ್ದು, ಗಲಾಟೆ ವಿಕೋಪಕ್ಕೆ ತೆರಳಿ ಕೊಲೆಯಲ್ಲಿ ಅಂತ್ಯವಾಗಿದೆ.
ಮೃತ ವ್ಯಕ್ತಿಯನ್ನು ನರಸಿಂಹಮೂರ್ತಿ (45) ಎಂದು ಗುರುತಿಸಲಾಗಿದೆ. ಮೃತನ ತಂದೆ ಹನುಮಂತರಾಯಪ್ಪ ಎಂಬುವವರು ಈ ಹಿಂದೆ ಬೆಸ್ಕಾಂ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಈತನ ಸಾವಿನ ನಂತರ ಆತನ ಪತ್ನಿಗೆ ಪಿಂಚಣಿ ಹಣ ಬರುತ್ತಿತ್ತು.
ಮೊದಲೇ ವಯಸ್ಸಾದ ತಾಯಿ ಬಂದ ಹಣವನ್ನೆಲ್ಲಾ ಕೂಡಿಡುತ್ತಿದ್ದರು, ಆದರೆ ಈ ಪಿಂಚಣಿ ಮೇಲೆ ಮೂವರು ಮಕ್ಕಳ ಕಣ್ಣು ಬಿದ್ದಿದೆ. ಈ ಹಣದ ವಿಚಾರವಾಗಿಯೇ ಸಹೋದರರ ನಡುವೆ ಸಾಕಷ್ಟು ಬಾರಿ ಸಣ್ಣ ಸಣ್ಣ ಕಿರಿಕ್ ಗಳು ಆಗುತ್ತಿದ್ದವು.
ಆದರೆ ನಿನ್ನೆ ಪಿಂಚಣಿ ಹಣಕ್ಕಾಗಿ ಮೂವರು ಮಕ್ಕಳಾದ ನರಸಿಂಹಮೂರ್ತಿ, ರಾಮಾಂಜಿ ಹಾಗೂ ಗಂಗಾಧರ್ ನಡುವೆ ಕುಡಿದ ಅಮಲಿನಲ್ಲಿ ಗಲಾಟೆಯಾಗಿದೆ. ಗಲಾಟೆ ವೇಳೆ ಹಿರಿಯ ಮಗ ನರಸಿಂಹಮೂರ್ತಿ ಮೇಲೆ ಗಂಗಾಧರ್ ಹಾಗೂ ತಮ್ಮ ರಾಮಾಂಜಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ತೀವ್ರ ಹಲ್ಲೆಗೆ ಒಳಗಾದ ನರಸಿಂಹಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೌರಿಬಿದನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಾದ ಗಂಗಾಧರ್ ಹಾಗೂ ತಮ್ಮ ರಾಮಾಂಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.