ಪ್ರಗತಿವಾಹಿನಿ ಸುದ್ದಿ, ಅಗಸಗಿ : ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಭಾನುವಾರ ನಡೆದಿದ್ದು, ಈ ವೇಳೆ ಹಲವರು ಗಾಯಗೊಂಡಿದ್ದಾರೆ.
ಅಂಬೇವಾಡಿ ಗ್ರಾಮದಲ್ಲಿನ ಶಾಲೆಯ ಸುವರ್ಣ ಮಹೊತ್ಸವ ಆಚರಣೆ ಸಂದರ್ಭದಲ್ಲಿ ಬೆನಕನಹಳ್ಳಿ ಗ್ರಾಮದ ಯುವಕನ ಮೇಲೆ ಅಂಬೇವಾಡಿ ಗ್ರಾಮದ ಯುವಕರು ಹಲ್ಲೆ ಮಾಡಿದ್ದಾರೆ. ಈ ವಿಷಯವನ್ನು ಹಲ್ಲೆಗೊಳಗಾದ ಯುವಕ ಬೆನಕನಹಳ್ಳಿ ಯುವಕರಿಗೆ ತಿಳಿಸಿ, ನಂತರ ಆತನ ಸ್ನೇಹಿತರೆಲ್ಲರೂ ಸೇರಿಕೊಂಡು ಅಂಬೇವಾಡಿ ಸೇತುವೆ ಹತ್ತಿರ ಆಗಮಿಸಿ ಅಂಬೇವಾಡಿಯ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಕಾರಣ
ಕೆಲವು ತಿಂಗಳ ಹಿಂದೆ ಬೆನಕನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರೆಗೆ ಪಕ್ಕದ ಅಂಬೇವಾಡಿ ಗ್ರಾಮದ ಯುವಕರು ಹೋಗಿದ್ದರು. ಈ ವೇಳೆ ಕುಣಿಯುತ್ತಿದ್ದ ಸಂದರ್ಭದಲ್ಲಿ ಎರಡು ಗ್ರಾಮಗಳ ಯುವಕರ ಮಧ್ಯೆ ವಾಗ್ವಾದ ನಡೆದು. ಅದು ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆದಿತ್ತು. ಆ ದ್ವೇಷವೇ ಇವತ್ತಿನ ಘಟನೆ ನಡೆಯಲು ಕಾರಣ ಎನ್ನಲಾಗುತ್ತಿದೆ.
ಅಂಬೇವಾಡಿಯ ಸುರಜ್ ಮಜುಕರ (21) ಹಲ್ಲೆಗೊಳಗಾದ ಯುವಕ. ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಗ್ರಾಮಗಳ ಮಧ್ಯೆ ಅಶಾಂತಿ ಉಂಟಾಗುವ ಮುನ್ನ ಸ್ಥಳೀಯರಿಂದ ಮಾಹಿತಿ ಪಡೆದ ಕಾಕತಿ ಪಿಐ ಶ್ರೀಶೈಲ ಕೌಜಲಗಿ, ಎಎಸ್ಐಗಳಾದ ಎನ್ ಪಟವರ್ಧನ್ ಮತ್ತು ಹೊಳೆನ್ನವರ ಅವರನ್ನು ಘಟನಾ ಸ್ಥಳಕ್ಕೆ ಕಳುಹಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿರುವುದಾಗಿ ತಿಳಿದಿದೆ. ಘಟನೆಗೆ ಸಂಬಂಧಿಸಿದಂತೆ ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ