Kannada NewsKarnataka News

ನಿಪ್ಪಾಣಿಯಲ್ಲಿ ಯುದ್ಧ ವಿಮಾನ: ಜೊಲ್ಲೆ ದಂಪತಿ ಪ್ರಯತ್ನಕ್ಕೆ ಫಲ


ಗಡಿ ಕಾಯುವ ಸೈನಿಕರಿಂದಾಗಿ ನಾವು ಸುಖದಿಂದ ಬದುಕುತ್ತಿದ್ದೇವೆ – ಶಾಸಕಿ ಶಶಿಕಲಾ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ನಮ್ಮ ದೇಶದ ಸುರಕ್ಷತೆಯಲ್ಲಿ ಭೂಸೈನ್ಯ, ವಾಯುಪಡೆ ಮತ್ತು ನೌಕಾದಳದ ಪಾತ್ರ ಬಹುಮುಖ್ಯವಾಗಿದೆ. ಅನೇಕ ಸಂಕಟಗಳನ್ನು ಎದುರಿಸುತ್ತ ಹಗಲಿರುಳು ಸೈನಿಕರು ಗಡಿಯನ್ನು ಕಾಯುತ್ತಿರುವುದರಿಂದ ನಾವು ಸುಖ-ಸಮಾಧಾನದಿಂದ ಬದುಕುತ್ತಿದ್ದೇವೆ’ ಎಂದು ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದಲ್ಲಿ ಬೃಹತ್ ಆಕಾರದ ಯುದ್ಧವಿಮಾನ ಜೋಡಣೆಯ ಕಾರ್ಯವನ್ನು ಭಾನುವಾರ ಪರಿಶೀಲಿಸಿ ಅವರು ಮಾತನಾಡಿದರು.

’ನನ್ನ ಮತಕ್ಷೇತ್ರದಲ್ಲಿ ಏನಾದರೂ ಒಂದು ವಿಭಿನ್ನ ಮಾಡಿ ತೋರಿಸುವ ನನ್ನ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಕನಸು ನನಸಾಗುತ್ತಿದೆ. ರಾಷ್ಟ್ರಭಕ್ತಿ, ದೇಶಾಭಿಮಾನದ ವಾತಾವರಣವನ್ನು ಮಕ್ಕಳಲ್ಲಿ ನಿರ್ಮಿಸುವ ನಿಟ್ಟಿನಲ್ಲಿ, ನಮ್ಮ ಹುತಾತ್ಮರಾದ ಸೈನಿಕರನ್ನು ನೆನೆಯಲು, ಯುದ್ಧದ ಸಮಯದಲ್ಲಿ ನಮ್ಮ ಸೈನಿಕರು ಹೋರಾಡುವ ಪದ್ಧತಿ ಗುರುತಾಗುವ ನಿಟ್ಟಿನಲ್ಲಿ ಒಂದು ಯುದ್ಧ ವಿಮಾನ ನಮ್ಮ ಕ್ಷೇತ್ರಕ್ಕೆ ಒದಗಿಸಬೇಕೆಂದು ನಾವಿಬ್ಬರೂ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರಲ್ಲ ಮನವಿ ಮಾಡಿಕೊಂಡಿದ್ದೇವು. ಕೇವಲ ೧೫ ದಿನಗಳಲ್ಲಿ ಅವರು ಅದಕ್ಕೆ ಅನುಮೋದಿಸಿದರು. ಈಗ ಇಲ್ಲಿಗೆ ಯುದ್ಧವಿಮಾನ ಬಂದು ಕಳೆದ ೧೫ ದಿನಗಳಿಂದ ಎಸ್.ಕೆ. ಸಿಂಗ್ ನೇತೃತ್ವದಲ್ಲಿ ಸುಮಾರು ೩೦ ಜನರಿಂದ ಜೋಡಣೆ ಕಾರ್ಯ ಭರದಿಂದ ಸಾಗಿದೆ. ನನ್ನ ಕಾರ್ಯಕರ್ತರ ಹಾಗೂ ಮತದಾರರ ಪರವಾಗಿ ರಾಜನಾಥಸಿಂಗ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದರು.
’ಈ ವಿಮಾನವು ಒಂದು ಪರ್ಯಟನ ಸ್ಥಳವಾಗಿ ನಮ್ಮ ಭಾಗದ ಆಕರ್ಷಣೆಯ ಕೇಂದ್ರಬಿಂದುವಾಗಿ ಪರಿಣಮಿಸಲಿದೆ. ಹಿಂದಿನ ಬಾಗಿಲಿನಿಂದ ಒಳಹೋಗಿ ವಿಮಾನವನ್ನು ಪರಿಶೀಲಿಸಿ ಯುದ್ಧದ ಸಮಯದಲ್ಲಿ ಅದು ಪಾತ್ರವಹಿಸಿದ ಸಂಪೂರ್ಣ ಮಾಹಿತಿ ಇಲ್ಲಿ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು. ಪೈಲಟ್‌ನ ಸ್ಥಾನದ ಬಾಗಿಲಿನಿಂದ ಹೊರಬೀಳುವ ವ್ಯವಸ್ಥೆ ಇದೆ’ ಎಂದರು.
’ಇಲ್ಲಿ ಆಕರ್ಷಕವಾದ ಉದ್ಯಾನವನವನ್ನು ನಿರ್ಮಿಸಲಾಗುವುದು, ವಿಶಾಲವಾದ ಮರಗಳನ್ನು ಬೆಳೆಸಲಾಗುವುದು, ಮಳೆಗಾಲದಲ್ಲಿ ಪ್ರವಾಸಿಗರಿಗೆ ತೊಂದರೆಯಾಗದ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕೂ ಮತ್ತೇನಾದರೂ ಉನ್ನತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿವೆ. ಕೆಲವೇ ದಿನಗಳಲ್ಲಿ ಈ ಪರ್ಯಟನ ಸ್ಥಳದ ಉದ್ಘಾಟನೆಯಾಗಲಿದೆ. ನುಡಿದಂತೆ ನಡೆದಿದ್ದೇವೆ, ನಡೆಯುತ್ತಿದ್ದೇವೆ. ಇದು ಚುನಾವಣೆಯ ನಂತರ ಪ್ರಥಮ ಕಾರ್ಯ. ನಗರಸಭೆ ಸದಸ್ಯರು, ಕಾರ್ಯಕರ್ತರ ಮಾಧ್ಯಮದಿಂದ ಎಲ್ಲ ಅಭಿವೃದ್ಧಿ ಕೈಕೊಳ್ಳಲಾಗುವುದು’ ಎಂದರು.
ವಿಮಾನ ಜೋಡಣೆಯ ಕಾರ್ಯದ ಪ್ರಮುಖ ಎಸ್.ಕೆ. ಸಿಂಗ್ ಮಾತನಾಡಿ ’೧೯೭೧ರ ಯುದ್ಧದಲ್ಲಿ ಈ ಐಎಲ್-೩೮ ವಿಮಾನದ ಪಾತ್ರ ಬಹುಮುಖ್ಯವಾಗಿತ್ತು. ನೌಕಾಪಡೆಗೆ ಸೇರಿದ್ದ ಈ ವಿಮಾನವು ಭಾರತದ ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು ಹಾಗೂ ಶತ್ರುಗಳ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿತ್ತು’ ಎಂದರು.
ಈ ಸಂದರ್ಭದಲ್ಲಿ ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಮಾಜಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಸದಸ್ಯ ರಾಜೇಂದ್ರ ಗುಂದೇಶಾ, ಸದ್ದಾಂ ನಗಾರಜಿ, ಸೋನಲ್ ಕೊಠಡಿಯಾ, ಪ್ರಭಾವತಿ ಸೂರ್ಯವಂಶಿ, ಸೋನಾಲಿ ಉಪಾಧ್ಯೆ, ದತ್ತಾತ್ರೇಯ ಜೋತ್ರೆ, ಸುರೇಶ ಶೆಟ್ಟಿ, ಮಲ್ಲಿಕಾರ್ಜುನ ಗಡಕರಿ, ಅಮೋಲ ಕೋಠಿವಾಲೆ, ಅಭಿನಂದನ ಮುದುಕುಡೆ, ಸಾಗರ ಮಿರ್ಜೆ, ವಿನೋದ ಬಾಗಡೆ, ಮೊದಲಾದವರು ಸಹಿತ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.

https://pragati.taskdun.com/general-transfer-guidelines-released/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button