Latest

ಕೂಡಲಸಂಗಮದಿಂದ ರಿವರ್ಸ್ ಲಿಫ್ಟಿಂಗ್ ಮಾಡಿ ನದಿ ತುಂಬಿಸಿ -ಸಂಗಮೇಶ ನಿರಾಣಿ

ಪ್ರಗತಿವಾಹಿನಿ ಸುದ್ದಿ, ಮುಧೋಳ – ನದಿಗಳು ನಾಗರಿಕತೆಯ ತೊಟ್ಟಿಲುಗಳು. ನದಿ ಉಳಿದರೆ ಮಾತ್ರ ಬದುಕು -ಬೆಳಕು. ಮಲಪ್ರಭಾ ನದಿ ಒತ್ತುವರಿಯನ್ನು ಶಿಘ್ರವೇ ತೆರವುಗೊಳಿಸಿ, ನಿರಂತರ ಹರಿವು ಕಾಯ್ದುಕೊಳ್ಳಲು ಕೂಡಲಸಂಗಮದಿಂದ ರಿವರ್ಸ್ ಲಿಫ್ಟಿಂಗ್ ಮಾಡಿ ನದಿ ತುಂಬಿಸಬೇಕು ಎಂದು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ ಅಧ್ಯಕ್ಷ ಸಂಗಮೇಶ ನಿರಾಣಿ ತಿಳಿಸಿದ್ದಾರೆ.

ಸಂಗಮೇಶ ನಿರಾಣಿ

ರಿವರ್ ಉಳಿವಿಗಾಗಿ ರಿವರ್ಸ್ ಲಿಫ್ಟಿಂಗ್:  ಮಲಪ್ರಭಾ ನದಿ ಕೂಡಲ ಸಂಗಮದಲ್ಲಿ ಕೃಷ್ಣೆಯನ್ನು ಸೇರುತ್ತದೆ. ನಾರಾಯಣಪೂರ ಜಲಾಶಯದ ಹಿನ್ನೀರು ಸಂಗಮದವರೆಗೂ ವ್ಯಾಪಿಸಿದೆ. ನವಿಲುತೀರ್ಥದಿಂದ ಸಂಗಮದವರೆಗೂ ೨-೩ ಕಿ.ಮೀಗೆ ಒಂದರಂತೆ ಚೆಕ್‌ಡ್ಯಾಂಗಳನ್ನು ಕಟ್ಟಿ, ಪ್ರತಿ ಚೆಕ್‌ಡ್ಯಾಂಗಳನ್ನು ಸಂಗಮದಿಂದ ರಿವರ್ಸ್ ಲಿಫ್ಟಿಂಗ್ ಮೂಲಕ ಭರ್ತಿ ಮಾಡಿದಲ್ಲಿ ಮಲಪ್ರಭೆ ಪಾತ್ರ ಹಿರಿದಾಗುತ್ತದೆ. ನದಿ ಸಮೃದ್ದಿಯಾಗುತ್ತದೆ. ಇದು ಹೊಸ ವಿಚಾರವೇನಲ್ಲ, ದೇಶದ ನಾನಾ ಮೂಲೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ತೆಲಂಗಾಣದ ಕಾಲೇಶ್ವರಂ ಯೋಜನೆಯಡಿ ಗೋದಾವರಿ ನದಿ ನೀರನ್ನು ಹಿಮ್ಮುಖವಾಗಿ ಲಿಫ್ಟ್ ಮಾಡಿ ನದಿ, ಕೆರೆಗಳನ್ನು ತುಂಬಿಸಿದ್ದಾರೆ. ಇದಲ್ಲದೇ ನಮ್ಮ ಜಿಲ್ಲೆಯಲ್ಲಿಯೇ ಕೃಷ್ಣಾನದಿಗೆ ಕಟ್ಟಿರುವ ಚಿಕ್ಕಪಡಸಲಗಿ, ಗಲಗಲಿ ಬ್ಯಾರೇಜ್‌ಗಳಲ್ಲಿ ನೀರನ್ನು ಹಿಮ್ಮುಖವಾಗಿ ಲಿಫ್ಟ್ ಮಾಡುವುದು ಹಲವಾರು ವರ್ಷಗಳಿಂದ ನಡೆದು ಬಂದಿದೆ.

ಚೆಕ್‌ಡ್ಯಾಂ ನಿರ್ಮಿಸಿ: ಕೃಷ್ಣಾ, ಘಟಪ್ರಭಾ ನದಿಗಳಿಗೆ ನಿರ್ಮಿಸಿದಂತೆ ಮಲಪ್ರಭಾ ನದಿಗೂ ನವಿಲುತೀರ್ಥ ಜಲಾಶಯ ಕೆಳಭಾಗದಿಂದ ಕೂಡಲ ಸಂಗಮದವೆಗೆ ೧೭೫ ಕಿ.ಮೀ ಅಂತರದಲ್ಲ್ಲಿ ಪ್ರತಿ ೨-೩ ಕಿ.ಮೀಗೆ ಒಂದರಂತೆ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ನಿಲ್ಲಿಸಬೇಕು. ಇದರಿಂದ ಅಂತರ್ಜಲವೂ ವೃದ್ದಿಯಾಗುತ್ತದೆ. ನಿರಂತರವಾಗಿ ನದಿ ಹರಿಯುತ್ತಿದ್ದರೆ ಒತ್ತುವರಿ ಪ್ರಶ್ನೆಯೂ ಉದ್ಭವಿಸುವುದಿಲ್ಲ.

೫ ನದಿಗಳ ಮೂಲಕವು ಮಲಪ್ರಭೆಗೆ ನೀರು ಹರಿಸಬಹುದು: ಮಲಪ್ರಭಾ ನದಿಗೆ ಕೊರತೆಯಾಗುವ ನೀರನ್ನು ಮಹಾದಾಯಿ, ಕಾಳಿ, ಘಟಪ್ರಭಾ ಹಾಗೂ ಕೃಷ್ಣ ನದಿಗಳ ಮೂಲಕ ನೀಗಿಸಬಹುದು. ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ಮೂಲಕ ೩ ಯೋಜನೆಗಳ ವರದಿ ತಯಾರಿಸಿ ಉ.ಕ. ಸಮಗ್ರ ನೀರಾವರಿ ಹೋರಾಟ ಸಮೀತಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಮೃತಧಾರೆ ಯೋಜನೆಯಡಿ ಕಾಳಿ ನದಿಯಿಂದ ಮಲಪ್ರಭಾಗೆ ಕಡಿಮೆ ವಿದ್ಯುತ್ ಬಳಸಿ ಟನಲ್ ಮೂಲಕ ಅಥವಾ ರಸ್ತೆ ಬದಿ ಲಿಫ್ಟ್ ಇರಿಗೇಶನ್ ಪೈಪಲೈನ್ ಮೂಲಕ ೩೦ ಟಿಎಂಸಿ ನೀರು ಹರಿಸಬಹುದು. ಬಸವಧಾರೆ ಯೋಜನೆ ಮೂಲಕ ಕೃಷ್ಣಾ ನದಿಯ ನೀರನ್ನು ಮಳೆಗಾಲದಲ್ಲಿ ೪ ತಿಂಗಳುಲಿಫ್ಟ್ ಮಾಡುವ ಮೂಲಕ ಹಿಡಕಲ್ ಡ್ಯಾಂಗೆ ಲಿಫ್ಟ್ ಮಾಡಿ ಅಲ್ಲಿ ಗ್ರ್ಯಾವಿಟಿ ಕಾಲುವೆ ಮೂಲಕ ೩೦ ಟಿ.ಎಂ.ಸಿ ನೀರು ಮಲಪ್ರಭಾ ನದಿಗೆ ಸೇರಿಸಬಹುದು. ವಿಜಯಧಾರೆ ಯೋಜನೆ ಮೂಲಕ ಹಿರಣ್ಯಕೇಶಿ ನದಿ ನೀರನ್ನು ಹಿಡಕಲ್ ಜಲಾಶಯಕ್ಕೆ ವಾರ್ಷಿಕ ೧೦ ಟಿ.ಎಂ.ಸಿ ಅಡಿ ನೀರು ಹರಿಸಿದರೆ ಅಲ್ಲಿಂದ ೬೦ ಕಿ.ಮೀ. ಉದ್ದದ ಗ್ರ್ಯಾವಿಟಿ ಕಾಲುವೆ ಮೂಲಕ ಮಲಪ್ರಭಾ ನದಿಗೆ ಸೇರಿಸಬಹುದು.

ಪ್ರವಾಹದ ನಿರು ಸದ್ಬಳಕೆ ಮಾಡಿ: ಪ್ರತಿವರ್ಷ ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಕ್ಕೆ ಪ್ರವಾಹ ಬರುತ್ತದೆ. ಕೆಲವು ಬಾರಿ ಈ ಪ್ರವಾಹ ಆವಂತರವನ್ನು ಸೃಷ್ಟಿಸುತ್ತದೆ. ಅದ್ದರಿಂದ ಎರಡೂ ಹಳ್ಳಗಳಿಗೆ ಬ್ಯಾರೇಜ್‌ಗಳನ್ನು ನಿರ್ಮಿಸುವುದರಿಂದ ಪ್ರವಾಹದ ನಿಯಂತ್ರಣ ಹಾಗೂ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ ಈ ಮೂಲಕ ಜಲಾನಯನ ಪ್ರದೇಶದ ನೀರಿನ ಕೊರತೆಯನ್ನೂ ನಿಗಿಸಬಹುದು.

ಮಲಪ್ರಭಾ ನದಿಗೆ ನೀರಿನ ಲಭ್ಯತೆ ಕಡಿಮೆ ಇದ್ದರೂ ನವಿಲುತೀರ್ಥ ಜಲಾಶಯ ಕಟ್ಟಿದ್ದರಿಂದ ಜಲಾಶಯದ ಕೆಳಭಾಗದಲ್ಲಿ ನೈಸರ್ಗಿಕ ಹರಿವು ನಿಂತು ಹೋಗಿದೆ. ಪ್ರವಾಹ ಬಂದಾಗ ಭೋರ್ಗರೆದು ನಂತರ ಬರಿದಾಗುವ ಮಲಪ್ರಭೆಯ ಅಸ್ಮಿತೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಮಲಪ್ರಭಾ ಜಲಾನಯನ ಪ್ರದೇಶ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿವೆ. ಸಾವಿರಾರು ಎಕರೆ ಭೂಮಿ ನೀರಾವರಿಯಿಂದ ವಂಚಿತವಾಗಿದೆ. ಸಾವಿರಾರು ಕೋಟಿ ಖರ್ಚು ಮಾಡಿ ನಿರ್ಮಿಸಿದ ಕಾಲುವೆಗಳು ನೀರಿನ ಕೊರತೆ ಅನುಭವಿಸುತ್ತಿವೆ. ಪ್ರತಿ ಬೆಸಿಗೆಯಲ್ಲಿ ನದಿ ಅವಲಂಭಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಾರ ಒತ್ತುವರಿ ತೆರವುಗೊಳಿಸಿ ನೈಸರ್ಗಿಕ ಹರಿವಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು ಎಂದು ಸಂಗಮೇಶ ನಿರಾಣಿ ತಿಳಿಸಿದ್ದಾರೆ.

ಸಂಬಂಧಿಸಿದ ಈ ಲೇಖನವನ್ನೂ ಓದಿ –  ಮಲಪ್ರಭೆಗೆ ಜೀವಕಳೆ ತುಂಬಬೇಕಿದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button