
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರಿ ಮಳೆಗೆ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿಯುತಿದ್ದು, ಜಲಾಶಯಗಳು ಬಹುತೇಕ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಎರಡೂ ಜಲಾಶಯಗಳಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಸವದತ್ತಿ ತಾಲ್ಲೂಕಿನ ಮುನವಳ್ಳಿ ಬಳಿ ನವಿಲು ತೀರ್ಥ ಜಲಾಶಯದಲ್ಲಿ ನಿರಂತರ ಮಳೆಗೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿ ಆಗುವತ್ತ ಮುಖ ಮಾಡಿದೆ.
2079.50 ಅಡಿ ಸಾಮರ್ಥ್ಯ ಹೊಂದಿರುವ ನವಿಲು ತೀರ್ಥ ಜಲಾಶಯದಲ್ಲಿ ಸದ್ಯ 2077.50 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿ ಆಗಲು ಇನ್ನು ಕೇವಲ 2 ಅಡಿ ಮಾತ್ರ ಬಾಕಿ ಇದೆ. 7170 ಕ್ಯೂಸೆಕ್ ಒಳಹರಿವು ಇದ್ದರೆ, 5594 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗಿದೆ.
ಇನ್ನು ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಬಳಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯ ಬಹುತೇಕ ಭರ್ತಿಯಾಗಿದೆ. 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2174.66 ಅಡಿ ನೀರು ಸಂಗ್ರಹವಾಗಿದೆ. 13,337 ಕ್ಯೂಸೆಕ್ ನೀರು ಒಳಹರಿವು ಇದೆ. 5290 ಕ್ಯೂಸೆಕ್ ಹೊರ ಹರಿವು ಇದೆ.
ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡುತ್ತಿರುವುದರಿಂದ ಮಲಪ್ರಭಾ, ಘಟಪ್ರಭಾ ನದಿ ಸೇರಿದಂತೆ ಇನ್ನಿತರ ನದಿಗಳ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಸೂಚನೆ ನೀಡಿದೆ.