*ಬಾಣಂತಿ, ಹಸುಗೂಸನ್ನೂ ನೋಡದೇ ಪಾತ್ರೆ, ಬಟ್ಟೆ ಸಮೇತ ಹೊರಹಾಕಿ, ಮನೆ ಜಪ್ತಿ ಮಾಡಿದ ಫೈನಾನ್ಸ್ ಸಿಬ್ಬಂದಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿ ಮೀರುತ್ತಿದೆ. ಫೈನಾನ್ಸ್ ಸಿಬ್ಬಂದಿ, ಒಂದುವರೆ ತಿಂಗಳ ಬಾಣಂತಿ, ಹಸುಗೂಸನ್ನೂ ಲೆಕ್ಕಿಸದೇ ಮನೆಯಿಂದ ಹೊರ ಹಾಕಿ ಮನೆಯನ್ನೇ ಜಪ್ತಿ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಲೋಹರ್ ಎಂಬುವವರು 5 ವರ್ಷಗಳ ಹಿಂದೆ 5 ಲಕ್ಷ ರೂಪಾಯಿ ಸಾಲ ಮಾಡಿದ್ದರಂತೆ. ಮೂರು ವರ್ಷಗಳಿಂದ ಕಂತು ತುಂಬುತ್ತಿದ್ದರಂತೆ, ಆದರೆ ಕಳೆದ ಆರು ತಿಂಗಳಿಂದ ಅನಾರೋಗ್ಯ ಹಾಗೂ ಮಗಳ ಬಾಣಂತನದಿಂದಾಗಿ ಕಂತು ತುಂಬಲು ಸಾಧ್ಯವಾಗಿಲ್ಲ. ಒಟ್ಟಿಗೆ 7.5 ಲಕ್ಷ ಹಣ ತುಂಬಬೇಕು ಎಂದು ಫೈನಾನ್ಸ್ ಕಂಪನಿಯವರು ಪೀಡಿಸುತ್ತಿದ್ದರಂತೆ. ನಿಂತ ಜಾಗದಲ್ಲಿ ಅಷ್ಟು ಹಣ ತುಂಬಲು ಸಾಧ್ಯವಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ ಎಂದು ಕೇಳಿದರೂ ಲೆಕ್ಕಿಸದೇ ಪೊಲೀಸ್ ಸಿಬ್ಬಂದಿ ಜೊತೆ ಮನೆ ಬಳಿ ಬಂದ ಫೈನಾನ್ಸ್ ಕಂಪನಿಯವರು, ಬಾಣಂತಿ ಮಗಳು, ಹಸುಗೂಸು, ಪತ್ನಿ ಹಾಗೂ ನಮ್ಮನ್ನು ಪಾತ್ರೆ, ಬಟ್ಟೆಗಳ ಸಮೇತ ಹೊರಹಾಕಿ ಮನೆ ಜಪ್ತಿಯಾಗಿದೆ ಎಂದು ಬೀಗ ಜಡಿದು ಹೋಗಿದ್ದಾರೆ. ಗೋಡೆಯ ಮೇಲೆ ಮನೆ ಫೈನಾನ್ಸ್ ಕಂಪನಿ ವಶಕ್ಕೆ ಪಡೆದಿದೆ ಎಂದು ಬರೆದಿದ್ದಾರೆ.
ನಿನ್ನೆಯಿಂದಲೂ ಮನೆಯಿಂದ ಹೊರಗೆ ಕುಳಿತುಕೊಂಡಿದ್ದೇವೆ. ಫೈನಾನ್ಸ್ ನವರ ಕಿರುಕುಳಕ್ಕೆ ಬೀದಿಗೆ ಬಂದಿದ್ದೇವೆ ಎಂದು ಲೋಹರ್ ಕುಟುಂಬದವರು ಕಣ್ಣೀರಿಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ