ಇಡಿ ಅಧಿಕಾರಿಗಳ ವಿರುದ್ಧ FIR: ವಾಲ್ಮೀಕಿ ನಿಗಮ ಹಗರಣಕ್ಕೆ ಬಿಗ್ ಟ್ವಿಸ್ಟ್ ; ಮಂಗಳವಾರ ಕಾಂಗ್ರೆಸ್ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸೋಮವಾರ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಾಜಿ ಸಚಿವ ಬಿ.ನಾಗೇಂದ್ರ ಹೆಸರು ಹೇಳುವಂತೆ ಇಡಿ ಅಧಿಕಾರಿಗಳಿಂದ ಒತ್ತಡ, ಮಾನಸಿಕವಾಗಿ ಹಿಂಸೆ ನೀಡಿ ಕಿರುಕುಳ ನೀಡಿದ್ದಾರೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ನಿರ್ದೇಶಕ ಕಲ್ಲೇಶ್. ಬಿ ಅವರು ಪೊಲೀಸರಿಗೆ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.
ಇಡಿ ಅಧಿಕಾರಿಗಳ ವರ್ತನೆ ವಿರೋಧಿಸಿ ಕಾಂಗ್ರೆಸ್ ಶಾಸಕರು ಮಂಗಳವಾರ ಪ್ರತಿಭಟನೆಗೆ ಮುಂದಾಗಿದ್ದಾರೆ.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಹೆಸರೇಳುವಂತೆ ನಿಗಮದ ಹಿಂದಿನ ಎಂಡಿ ಕಲ್ಲೇಶಪ್ಪ ಅವರಿಗೆ ಕಿರುಕುಳ ನೀಡಿರುವ ಇ ಡಿ ಆಧಿಕಾರಿಗಳ ವರ್ತನೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ಶಾಸಕರು ನಾಳೆ ಬೆಳಗ್ಗೆ 09.30ಕ್ಕೆ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಮುಂಭಾಗ ಧರಣಿ ನಡೆಸಲಿದ್ದಾರೆ.
ಕಲ್ಲೇಶ್. ಬಿ ಅವರು ಶೇಷಾದ್ರಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ರವರು ತಮ್ಮ ಠಾಣೆಯಲ್ಲಿ ದಾಖಲಾಗಿರುವ ಎನ್.ಸಿ.ಆರ್.ನಂ.166/2024 ಅನ್ನು ವರ್ಗಾವಣೆ ನೀಡಿದ್ದಾರೆ. ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ದೂರುದಾರರಾದ ಕಲೆಶ್.ಬಿ ರವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಪರ ನಿರ್ದೇಶಕನಾಗಿ ಕರ್ತವ್ಯ ಮಾಡುತ್ತಿದ್ದು, ಮಹರ್ಷಿ ಮಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ. ಜಾರಿ ನಿರ್ದೇಶನಾಲಯದ ತನಿಖೆಯನ್ನು ಮಾಡುತ್ತಿದ್ದು, ಈ ಸಂಬಂಧ ನನ್ನನ್ನು ವಿಚಾರಣೆಗೆ ಹಾಜರಾಗುವಂತೆ ಇಡಿಯವರು ದಿನಾಂಕ: 16.07.2024 ರಂದು ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದು, ಅದರಂತೆ ನಾನು ಶಾಂತಿನಗರದ ಜಾರಿ ನಿರ್ದೇಶನಾಲಯ ಕಛೇರಿಗೆ ಹೋಗಿದ್ದು, ನನ್ನ ಹೇಳಿಕೆಯನ್ನು ಮುರುಳಿ ಕಣ್ಣನ್ ಸಹಾಯಕ ನಿರ್ದೇಶಕರು ಇ.ಡಿ ದಾಖಲಿಸಿಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ನನಗೆ 17 ಪ್ರಶ್ನೆಗಳನ್ನು ಕೇಳುತ್ತಾರೆ. ನಾನು 17 ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ. ಅದರಲ್ಲಿ.. ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತ (ಫೈಲ್)ಬೇಕು ಹಾಗು ನನ್ನ ಕೆಳಹಂತದ ಅಧಿಕಾರಿಗಳು ಬೇಕಾಗುತ್ತಾರೆಂದು ತಿಳಿಸಿರುತ್ತೇನೆ. ಆಗ ಕಣ್ಣನ್ ರವರು ದಿನಾಂಕ:18.07.2024 ರಂದು 2:00 ಗಂಟೆಗೆ ಬನ್ನಿ ಆಗ ಕಡತ ಮತ್ತು ಇತರೆ ಅಧಿಕಾರಿಗಳನ್ನು ಕರೆಯುತ್ತೇನೆಂದು ತಿಳಿಸಿರುತ್ತಾರೆ.
ವಿಚಾರಣೆ ಮುಗಿದು ನನ್ನ ಕಡೆಯಿಂದ ನನ್ನ ಹೇಳಿಕೆಗೆ ಸಹಿ ಪಡಿಯುತ್ತಾರೆ, ನಾನು ನನ್ನ ಹೇಳಿಕೆಯ ಪ್ರತಿಯನ್ನು ನನಗೊಂದು ಕೊಡಿ ಎಂದು ಕೇಳುತ್ತೇನೆ. ಆದರೆ ಸದರಿಯವರು ಕೊಡಲಿಲ್ಲ… ನಂತರ ಪುನಃ ನನ್ನನ್ನು ಪ್ರಶ್ನೆ ಕೇಳುತ್ತಾರೆ. ಆದರೆ ಈ ಸಲ ಯಾವುದೇ ಲಿಖಿತ ರೂಪದಲ್ಲಿ, ಪ್ರಶ್ನೆ ನೀಡುವುದಿಲ್ಲ. ಎಂ.ಜಿ ರೋಡ್ ಬ್ಯಾಂಕ್ ಖಾತೆಗೆ ಖಜಾನೆಯ ಮೂಲಕ ಹಣವನ್ನು ಮಹರ್ಷಿ ಮಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಜಮಾ ಮಾಡಿರುವುದು ತಪ್ಪು ಎಂದು ಹೇಳುತ್ತಾರೆ, ಆಗ ನಾನು ಸರ್ಕಾರದ ಆದೇಶದ ಪ್ರಕಾರ ಬಿಲ್ ಮಾಡಿ, ದಿನಾಂಕ:25.03.2024 ರಂದು ಜಮಾ ಮಾಡಿದ್ದೇನೆ. ಆದರೆ ಈ ಖಾತೆಯಲ್ಲಿ ದಿನಾಂಕ:05.03.2024 ರಿಂದಲೇ ಅಕ್ರಮ ಹಣ ವರ್ಗಾವಣೆಯಾಗಿರುತ್ತದೆ, ಆದ್ದರಿಂದ ನನ್ನದು ಯಾವುದು ತಪ್ಪು ಇಲ್ಲ., ಎಂದು ಹೇಳಿದರೂ ಸಹ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆಂದು ಧಮ್ಮಿ ಹಾಕಿರುತ್ತಾರೆ. ಎರಡು ವರ್ಷ ಆದರು ನಿಮಗೆ ಬೆಲ್ ಸಿಗುವುದಿಲ್ಲ ಎಂದು ಬೈಯುತ್ತಾರೆ.
ಇ.ಡಿಯು ನಿಮಗೆ ಸಹಾಯ ಮಾಡುತ್ತದೆ. ಆದರೆ ನೀವು ಎಂ.ಜಿ ರೋಡ್ ಖಾತೆಗೆ ಅನುದಾನ ಜಮಾ ಮಾಡಲು ಮಾಜಿ ಮಂತ್ರಿಗಳಾದ ನಾಗೇಂದ್ರ, ಸರ್ಕಾರದ ಹೈಯರ್ ಅಥಾರಿಟಿ ಮತ್ತು ಎಫ್.ಡಿ ಇಲಾಖೆಯಿಂದ ಸೂಚನೆ ಇತ್ತು ಎಂದು ಒಪ್ಪಿಕೊಂಡಲ್ಲಿ ನಿಮ್ಮನ್ನು ಬಿಡುತ್ತೇವೆ, ಇಲ್ಲದಿದ್ದರೆ ಅರೆಸ್ಟ್ ಮಾಡುತ್ತೇವೆಂದು ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ.
ನಂತರ ಮುರುಳಿ ಕಣ್ಣನ್ ರವರು ಮಿತ್ತಲ್ ಐ.ಆರ್.ಎಸ್ ಇವರ ಹತ್ತಿರ ಕಳುಸಿರುತ್ತಾರೆ. ಮಿತ್ತಲ್ ರವರು ನನ್ನನ್ನು ನಿಲ್ಲಿಸಿ, ಈ ರೀತಿ ಬೈಯುತ್ತಾರೆ, 1), ನೀನೊಬ್ಬ ಅಪರಾಧಿ, 2) ನಿನ್ನನ್ನು ಈಗಲೇ ಅರೆಸ್ಟ್ ಮಾಡುತ್ತೇನೆ. 3) ಇ.ಡಿ ಬಗ್ಗೆ, ನಿನಗೆ ಗೊತ್ತಿಲ್ಲ., 4) 2-3 ವರ್ಷ ನಿನಗೆ ಬೆಲ್ ಸಿಗುವುದಿಲ್ಲ. 5) ನಿನ್ನ ಹೇಳಿಕೆಯನ್ನು ನಾನು ಓದಿದ್ದೇನೆ. 6) ಇದು ಪ್ರಯೋಜನಕ್ಕೆ ಬರುವುದಿಲ್ಲ. 7) ನಿನಗೆ ಇ.ಡಿ ಸಹಾಯ ಮಾಡಬೇಕೆಂದರೆ, ನೀನು ಬರೆದು ಕೊಡಬೇಕು, ಎಂ.ಜಿ ರೋಡ್ ಖಾತೆಗೆ ಹಣವನ್ನು ಸಿ.ಎಂ. ಸರ್, ನಾಗೇಂದ್ರ ಸರ್ ಮತ್ತು ಎಫ್,ಡಿ ನಿರ್ದೇಶನದಂತೆ ಮಾಡಿರುತ್ತೇನೆ, ಅವರ ಒತ್ತಡ ಇತ್ತು ಎಂದು ಬರೆದುಕೊಡಲು ತಿಳಿಸಿರುತ್ತಾರೆ, ಪದೆ ಪದೆ ಇದೇ ಪ್ರಶ್ನೆ ಕೇಳಿ ನಿನಗೆ 7 ವರ್ಷ ಜೈಲ್ ಶಿಕ್ಷೆ ಮಾಡಿಸುವವರೆಗೂ ಬಿಡುವುದಿಲ್ಲ ಎಂದು ಬೈದು, ನನ್ನನ್ನು ಭಯಬಿತನನ್ನಾಗಿ ಮಾಡಿರುತ್ತಾರೆ,
ನಂತರ ಮಿತ್ತಲ್ ರವರು ಕಣ್ಣನ್ ರವರಿಗೆ ದೂರವಾಣೆ ಕರೆ ಮಾಡಿ, ತಮ್ಮ ಚೆಂಬರ್ ಗೆ ಕರೆಯಿಸಿಕೊಳ್ಳುತ್ತಾರೆ. ಪುನಃ ಇಬ್ಬರು ಸೇರಿ, ಅದೇ ಪ್ರಶ್ನೆ ಕೇಳುತ್ತಾರೆ, ಸಿ.ಎಂ. ಸರ್, ನಾಗೇಂದ್ರ ಸರ್ ಮತ್ತು ಎಫ್.ಡಿ ರವರ ಸೂಚನೆ ಇತ್ತು ಎಂದು ಒಪ್ಪಿಕೊ, ಇಲ್ಲದಿದ್ದರೇ ಈಗಲೇ ಅರೆಸ್ಟ್ ಮಾಡುತ್ತೇವೆಂದು ನನಗೆ ಭಯ ಬರುವಂತೆ ವಾತಾವರಣ ಸೃಷ್ಟಿ ಮಾಡಿರುತ್ತಾರೆ, ಕೊನೆಗೆ ಇಬ್ಬರು ಚರ್ಚಿಸಿ ಏನು ಮಾಡೋಣಾ ? ಅರೆಸ್ಟ್
ಮಾಡೋಣವೇ ? ಎಂದು ಮಾತನಾಡಿಕೊಳ್ಳುತ್ತಾರೆ,
ನಂತರ ಮುರುಳಿ ಕಣ್ಣನ್ ರವರು ಇವತ್ತು ಬೇಡ ದಿನಾಂಕ: 18.07.2024 ಕ್ಕೆ ಬರುತ್ತಾರಲ್ಲಾ ಅವತ್ತು ಮಾಡೋಣ ಎಂದು ತಿಳಿಸಿರುತ್ತಾರೆ, ಆದ್ದರಿಂದ ನಾನು ಯಾವುದೇ ತಪ್ಪು ಮಾಡದಿದ್ದರೂ ಸಹ ಕಾನೂನು ಬಾಹಿರವಾಗಿ ವಿಚಾರಣೆ ಮಾಡಿ ನನ್ನನ್ನು ಬೈದು, ನನ್ನ ಮೇಲೆ ಬೆದರಿಕೆ ಹಾಕುತ್ತಿರುವ ಮಿತ್ತಲ್ ಮತ್ತು ಕಣ್ಣನ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಕೊಟ್ಟ ದೂರು ಇತ್ಯಾದಿ.
ಎಫ್ ಐಆರ್ ದಾಖಲಾಗಿದ್ದು, ಇಡಿ ಅಧಿಕಾರಿಗಳ ಕಿರುಕುಳ ವಿರೋಧಿಸಿ ಮಂಗಳವಾರ ಪ್ರತಿಭಟನೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ